03 ನವೆಂಬರ್, 2009

ಮೂರ್ತಿ ''ಅನಂತ'' ಶಾಪ!

ನವೆಂಬರ್ 3, 2009
ಮೂರ್ತಿಯವರ "ಅನಂತ" ಶಾಪ
ಅಧಿಕಾರಸ್ಥ ಯಡಿಯೂರಪ್ಪನವರ ಪರ ವಹಿಸಿಕೊಂಡು, ಡಾ ಅನಂತಮೂರ್ತಿಯವರು, ಗಣಿಧಣಿಗಳಿಗೆ ಹಿಡಿಶಾಪ ಹಾಕಿರುವುದಾಗಿ ವರದಿಯಾಗಿದೆ. ಅದು ಸಹಜವೂ ಎನಿಸುತ್ತದೆ. ಆದರೆ "ಸಂಸ್ಕೃತಿವಂತ"ವಾದ ಈ ಶಾಪ, ಅದರ ಗಂಧ-ಗಾಳಿಯೂ ಇರಲಾರದವರಿಗೆ ತಟ್ಟೀತು ಹೇಗೆ- ಎನ್ನುವುದೇ ಕುತೂಹಲ!
ನಾಡಿನ ಮಣ್ಣಿನಿಂದ ಕುಡಿಯೊಡೆದ ಸಂಸ್ಕೃತಿ, ರಸ, ಸಾರಗಳಿಗೆ ಸ್ಪಂದಿಸಲಾರದೆ, ಕೇವಲ ಮಣ್ಣು-ಕಲ್ಲಿನ ಲೂಟಿಯಿಂದ ಕಂತೆಗಟ್ಟಲೆ ಕಮಾಯಿಸಿದವರು, ಈಗ ಅದನ್ನು ಹೂಡಿ, ಜೊಲ್ಲುಸುರಕ ಮಾನವ ಜೀವಿಗಳನ್ನೇ ಕರೀದಿಸಿಟ್ಟುಕೊಂಡಿದ್ದಾರೆಂದು ಹುಯಿಲೆದ್ದಿದೆ. ಜಾಣ ವರ್ತಕರು, ತಮ್ಮ ರಾಜಕೀಯ "ವ್ಯವಹಾರ"ದಲ್ಲಿ, ಈ "ಮಾಲ"ನ್ನು ಲಾಭದಾಯಕವಾಗಿಯೇ ಬಳಸಿಕೊಳ್ಳುವುದರಲ್ಲೂ ಅನುಮಾನವಿಲ್ಲ. ಆದರೆ ಕೋಟಿ ಹಣಕ್ಕಾಗಿ ತಮ್ಮನ್ನೇ ಮಾರಟ ಮಾಡಿಕೊಳ್ಳುವವರ "ಸಾಂಸ್ಕೃತಿಕ ಮಾನ"ವಾದರೂ ಎಷ್ಟು; ಅವರು ಪ್ರತಿನಿಧಿಸುವ ನೂರು-ನೂರು ಲಕ್ಷ ಮಂದಿ ಮಹಾಜನತೆಯ "ಮರ್ಯಾದೆ"ಯಾದರೂ ಇನ್ನೆಷ್ಟು? ಸಂಸ್ಕೃತಿ ಹೀನತೆಯೇ ರಾಜಕೀಯದ ಹೆಗ್ಗುರುತೆಂದು ಮಹಾಜನತೆಯೇ ಒಪ್ಪಿಕೊಂಡುಬಿಟ್ಟಿದೆ; ಈ ಮಂದಿಯನ್ನೇ ಅದು ಪರಾಕು ಹೇಳಿ ಪೋಷಿಸುತ್ತಿದೆ.
ನಾಡಿನ ಮಹಾನ್ ಚಿಂತಕರೂ, ಕವಿಗಳೂ, ಉದಾತ್ತ ಸಾಂಸ್ಕೃತಿಕ ಧನ್ಯ ಜೀವಿಗಳೂ ಪ್ರಾಮಾಣಿಕ ಪ್ರಭಾವ ಬೀರಿ, ನಾಡಿನ ಮಹಾಜನತೆಯಲ್ಲಿ ಮಾನದ, ಮರ್ಯದೆಯ ಮೌಲ್ಯ ಉಂಟುಮಾಡಿದ್ದೇ ಅಗಿದ್ದಲ್ಲಿ ರಾಜಕೀಯ ಸನ್ನಿವೇಶ ಇಷ್ಟು ಅಸಹ್ಯಕರವಾಗಿರುತ್ತಿತ್ತೇ?
ಆರ್. ಕೆ. ದಿವಾಕರ
ಕರೆ:9448047559

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ