11 ನವೆಂಬರ್, 2009

ಈ ಭಾಷಾಭಿಮಾನ ಅದೆಷ್ಟು ನೈಜ?

ಮಹಾರಾಷ್ಟ್ರದ ಸೂಕ್ಷ್ಮ ಸಂವೇದೀ ಸ್ಪಂದನಶೀಲ ಜನತೆ ಆ ರಾಜ್ಯದ ವಿಧಸಭೆಗೆ 13 ಮಂದಿ ಶಾಸಕರನ್ನು ಅರಿಸಿ ಕಳಿಸಿರುವುದು ಅಭಿಮಾನದ ಸಂಗತಿ. ವ್ಯಾವಹಾರಿಕವಾದ ಶಿಕ್ಷಣ ಮಾಧ್ಯಮ, ಆಡಳಿತ ಮಾಧ್ಯಮ, ಸ್ಥಳೀಯರ ಉದ್ಯೋಗಾವಕಾಶ ಇತ್ಯಾದಿ ಅಸಲಿ ವಿಚಾರ-ವಿವಾದಗಳಲ್ಲಿ ಜನತೆಗೆ ಪ್ರಾಮಾಣಿಕ ಎಚ್ಚರ ಉಂಟಾಗುತ್ತಿದೆಯೇ ಎಂಬ ಆಶಾಬಾವವನ್ನು ಈ ಫಲಿತಾಂಶ ಪ್ರೇರೇಪಿಸಿತ್ತು. ಆದರಿದು ಅವಿವೇಕದ ಹಾದಿ ಹಿಡಿಯಿತೋ ಅಥವಾ ಮೋಸ ರಾಜಕೀಯದ ತಂತ್ರಗಾರಿಕೆ ಮಾತ್ರವಾಗಿ ತಲೆಯೆತ್ತಿರುವುದೋ ಎಂಬ ಅನುಮಾನ ಹುಟ್ಟಿಸುವ ವಿದ್ಯಮಾನ ವಿಧಾನ ಸಭೆಯ 'ಸಾಂಪ್ರದಯಕ' ಅಧಿವೇಶನದಲ್ಲೇ ನಡೆದು ಹೋಗಿದೆ!
ಮಹಾರಾಷ್ಟ್ರ ವಿಧನಸಭೆಯಲ್ಲಿ, ಸದಸ್ಯರು ಮರಾಠಿಯಲ್ಲೇ ಪ್ರಮಾಣವಚನ ಸ್ವೀಕರಿಸಬೇಕೆಂದು ಆಶಿಸುವುದರಲ್ಲಿ, ಬೇಡುವುದರಲ್ಲಿ, ಒತ್ತಾಯಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಹಿಂದಿಯಲ್ಲಿ ಪ್ರಮಾಣ ಆರಂಭಿಸಿದ ಸದಸ್ಯರ ಮೈಕ್ ಕಿತ್ತುಕೊಳ್ಳುವುದು, ಕಪಾಳಕ್ಕೆ ಹೊಡೆಯುವುದು, ಬೀದಿ ಜಗಳದಂತಹ ಇಂತಹ ಇನ್ನಿತರ ಕ್ರಿಯಾ-ಕಲಾಪಗಳು, ಭಾಷಾಭಿಮಾನದ ಮೌಲ್ಯವನ್ನಲೀ, ಅಂಥದನ್ನು ಹೊಂದಿರುವ ಸಂಸ್ಕೃತಿವಂತಿಕೆಯನ್ನೂ ಸೂಚಿಸುವುದಿಲ್ಲ. ಅದೂ ರಾಷ್ಟ್ರಭಾಷೆಯೆಂಬ ಕೃತಕ ಮೌಲ್ಯದ ಹಿಂದಿಯಲ್ಲಿ ಕಲಾಪ ನಡೆಯುತ್ತಿರುವಾಗ ಈ ದಾಂಧಲೆ ನಡೆದಿದ್ದು, ಪ್ರತಿವಾದಿಗಳಿಗೆ ಗಟ್ಟಿಯಾದ ನೆಪವನ್ನೇ ಒದಗಿಸುತ್ತದೆ; ರಾಷ್ಟ್ರಮಟ್ಟದ ಬಹುಮತದ ವಿರೋಧವನ್ನು ಗಂಟು ಹಾಕುತ್ತದೆ; ಆ ಕೃತಕ ಬಹುಮತದೆದುರು, ನೈಜವಾದ ಪ್ರಾದೇಶಿಕಯೆ ಮತ್ತು ಭಾಷಾಭಿಮಾನದ ಮೌಲ್ಯಗಳು ತಲೆತಗ್ಗಿಸಿ ವಿಚಾರಣೆ ಎದುರಿಸಬೇಕಾಗಿ ಬರುತ್ತದೆ. ಅದ್ದರಿಂದ ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ , 'ಗೋಣಿ ಎತ್ತಿ ಒಗೆದ ಹೊಸ ಅಗಸ'ನ ಈ ಸಾಹಸ, ನಿಜವಾದ ಉದಾತ್ತವಾದಿಗಳು ಹೆಮ್ಮೆಪಡುವ ಸಂಗತಿಯಾಗಲಿಲ್ಲ!
ಒಂದು ರಾಜ್ಯದ ವಿಧಾನಸಭೆಯಲ್ಲಿ, ಶಾಸಕರು, ಆಯಾ ಪ್ರದೇಶದ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕಾದ್ದು, ಸೈದ್ಧಾಂತಿಕವಾಗಿ ಉಚಿತ ಹಾಗೂ ವಿಹಿತ. ಶಾಸನಸಭೆಯಲ್ಲಿ, ಪ್ರದೇಶದ ಜನತೆಯ ಹಿತಾಸಕ್ತಿ ಪ್ರತಿನಿಧಿಸುವವರು, ಅಲ್ಲಿನ ಭಾಷೆಯಲ್ಲೇ ವ್ಯಹರಿಸಬೇಕೆನ್ನುವುದು, ನೀತಿ ಮತ್ತು ಆತ್ಮವಂತಿಕೆ. ಭಾರತೀಯ ಪ್ರಜೆಗಳಾದವರು ಭಾರತ ದೇಶದ ಯಾವ ಭಾಗದಲ್ಲಿ ಬೇಕಾದರೂ ಸಂಚರಿಸಬಹುದು; ಎಲ್ಲಿ ಬೇಕಾದರೂ ನೆಲೆಸಬಹದು; ಆಸ್ತಿ-ಪಾಸ್ತಿ ಸಂಪಾದಿಸಬಹುದೆಂಬ ಔದಾರ್ಯವನ್ನೇನೋ ನಮ್ಮ ಸಂವಿಧಾನ ತೋರಿಸಿದೆ. ಅಂದಮಾತ್ರಕ್ಕೆ ಪ್ರಾದೇಶಿಕ 'ಸ್ವಂತಿಕೆ' ಇರಲೇಬಾರದು; ಜನತೆಗೆ ವಿಶಿಷ್ಟವಾದ "ನೆಲನಿಷ್ಠೆ" ಎನ್ನುವುದೇ ನಿಷಿದ್ಧ ಎಂದೇನೂ ಅದು ವಿಧಿಸುವುದಿಲ್ಲ! ಈ ತರ್ಕ-ವಿವೇಕಗಳು, ನವನಿರ್ಮಾಣ ಸಮಿತಿಯ "ಪೌರುಷ"ದಲ್ಲಿ ಇದ್ದಂತೆನಿಸಲಿಲ್ಲ!
ಪ್ರತಿ ರಾಜ್ಯವೆನ್ನುವುದೂ ಒಂದೊಂದು ಸಾಂಸ್ಕೃತಿಕ ಘಟಕ. ಭಾಷೆಗಳು ಅದಕ್ಕೆ ಆಧಾರ. ರಾಜ್ಯಗಳು ತಂತಮ್ಮ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ವಿಶಿಷ್ಟತೆ-ವೈವಿಧ್ಯತೆಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕೆನ್ನುವುದೇ ಭಾಷವಾರು ಪ್ರಾಂತ ವಿಂಗಡಣೆಯ ಉದ್ದೇಶ. ಆ 'ಪಕ್ಷ'ದಲ್ಲಿದ್ದರೂ, ಈ 'ಪಕ್ಷ'ದಲ್ಲಿದ್ದರೂ, ಸಂಸ್ಕೃತಿಯ ಅ, ಆ, ಇಯೂ ಗೊತ್ತಿರದ ಅಬ್ಬರದ ರಾಜಕಾರಣಿಗಳಿಗೆ ಈ ಸೂಕ್ಷ್ಮಸಂವೆದನೆ ಎಲ್ಲಿಂದ ಅರ್ಥವಾಗಬೇಕು?!
ಅವರ ಭಾಗಕ್ಕೆ, ಮತಧರ್ಮಜಾತಿಗಳಂತೆ, ಭಾಷೆ ಸಹ, ಓಟು ಒಡೆಯುವ ಒಂದು ಸಾಧನ! ಅವರ ಉದಾರ ಕಾರುಬಾರಿನಲ್ಲಿ, ಭಾಷೆಯ 'ಸಾಧನೆ'ಯೂ ಅಷ್ಟಕ್ಕೇ ಸೀಮಿತವಾಗಿ ಉಳಿದುಕೊಂಡಿದೆ!
ರಾಜಕೀಯ ಅಸಭ್ಯತೆ, ಸಂನ್ನತೆಯನ್ನು ಇನ್ನೂ ಸಂಪೂರ್ಣ ನುಂಗಿ-ನೊಣೆದಿರದಿದ್ದರೆ, ವಿವೇಕಶಾಲಿಗಳಾದವರು ಆಲೋಚಿಸಲಿ- ಒಂದು ನೆಲದಲ್ಲಿ ನೆಲೆ ನಿಂತವರು ಆ ಭಾಷೆಯ ಅರಿವಿಲ್ಲದೆ ಬದುಕುವುದು ಅಸಾಧ್ಯ ಎಂಬ ಸಹಜ ಸನ್ನಿವೇಶ ಉಂಟಾಗಬೇಕು; ಇದು ತಳಮಟ್ಟದಿಂದ-ಬೇರುಮಟ್ಟದಿಂದ, ಪ್ರಜ್ಞಾತೀತವಾಗಿ-ಸ್ವಯಂಚಲಿತವಾಗಿ ಜಾರಿಯಾಗಬೇಕು. ಇದಕ್ಕಾಗಿ, ಪ್ರಾಥಮಿಕ ಶಿಕ್ಷಣ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಮಾತ್ರಾ ನಡೆಯುವುವಂತಾಗಬೇಕು. ಹೀಗೆ ಮಾಡುವ 'ಗಂಡಸ್ತನ' ಅಂದರೆ 'ಪುರುಷಕಾರ' ರಾಷ್ಟ್ರದ ರಕ್ತದಲ್ಲಿದೆಯೇ?!
ಕರೆಯಬೇಕಾದರೆ ಇದು ಸಂಖ್ಯೆ 9448047559

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ