09 ನವೆಂಬರ್, 2009

ಅಂತೂ ''ಪರಿಹಾರ"ವಾಯಿತೇ?

ರಾಜ್ಯದ ಬಿಜೆಪಿ ಆಡಳಿತದಲ್ಲಿ 'ಹುಟ್ಟಿಹಾಕಿದ್ದ' ತರಲೆ ಅಂತೂ ಪರಿಹಾರವಾಯಿತೆಂದು ಅನುಬಂಧಿಗಳು ಅಭಿಮಾನದ ನಿಟ್ಟುಸಿರು ಬಿಡುತ್ತಿದ್ದಾರೇನೋ, ಈ 'ಪರಿಹಾರ' ಎಷ್ಟು ಕಾಲದ್ದು? ತರಲೆಯಾದರೋ ತತ್ತ್ವ-ಸೈದ್ಧಾಂತಿ ಭಿನ್ನಮತದಿಂದ ಉಂಟಾಗಿತ್ತೇ? ತತ್ತ್ವ-ಸಿದ್ಧಾಂತದ ಅರ್ಥೈಕೆಯಲ್ಲಿ ವ್ಯತ್ಯಾಸವಿದ್ದು, ರಾಜೀಸೂತ್ರವನ್ನು, ಸರಿಯಾದ ತಿಳುವಳಿಕೆ ಉಂಟುಮಾಡುವುದಕ್ಕಾಗಿ ಹೆಣೆಯಲಾಗಿದೆಯೇ? ಹಾಗಿದ್ದರೆ ಇದನ್ನು 'ತರಲೆ' ಎಂದು ಕರೆಯುವುದೇ ಅಪಭ್ರಂಶವಲ್ಲವೇ? ಇದಕ್ಕಾದರೋ ತತ್ತ್ವ-ಸಿದ್ಧಾಂತದ ಸೂತಕವೂ ಇರಲಿಲ್ಲ ಎನ್ನುವುದು, ಕಾಮನ್‌ಸೆನ್ಸ್‌ ಉಳ್ಳ ಹೈಸ್ಕೂಲ್‌ ಮಕ್ಕಳಿಗೂ ಗೊತ್ತಾಗಿಹೊಗಿರುವ ಸಂಗತಿ! ಹಾಗಾದರೆ Behave yourself ಎಂದು ಅತಿರೇಕಿಗಳಿಗೆ ಚಾಟಿಬೀಸಿ ಹೇಳುವ ತಾಖತ್ತನ್ನು ಹೈಕಮಾಂಡಾದರೂ ಉಳಿಸಿಕೊಂಡಿದೆ ಎಂದು ಹೆಮ್ಮೆ ಪಡೋಣವೇ? ಅದು ಇದ್ದಿದ್ದರೆ ಮಾನ ಬೀದಿಬಿಚ್ಚಾಗುವವರೆಗೂ ಕಾಯಬೇಕಾಗಿತ್ತೇಕೆ?
'ರಾಜಕೀಯ'ವೇ ಮರ್ಯಾದೆಗೆಟ್ಟವರ ವ್ಯವಹಾರ ಎನ್ನುವುದೇನೋ ಜನಜನಿತ ಸಂಗತಿಯೇ ಹೌದು. ಆದರೂ ರಾಜಕೀಯದ ಅಷಡ್ಡಾಳಗಳು ಹೆಸರಿಗಾದರೂ, ತೆರೆಮರೆಯ 'ಮರ್ಯಾದೆ'ಯಲ್ಲಿ ನಡೆಯುತ್ತಿತ್ತು. ಆದರೆ ಇಲ್ಲಿನ ವಿರೋಧಾಭಾಸಕಗಳು, ಅದುಮಿದಷ್ಟೂ ಅಡಗದೆ ಜೋರು-ಜೋರಾಗಿ ತಲೆಯೆತ್ತಿ, ಬೀದಿಯಲ್ಲೇ ಬತ್ತಲಗಿಹೋಯಿತಲ್ಲಾ, ಅದು ಹೈಕಮಾಂಡ್‌ಗೆ ಕಣಲಾರದೇ ಹೋಯಿತೇ? ಈ ವಿದ್ಯಮಾನವನ್ನು ಸಹ ಅತ್ಯಭಿಮಾನಿಗಳು 'ಪ್ರಾಮಾಣಿಕತೆ', 'ಪಾರದರ್ಶಕತೆ' ಎಂದೇ ಅರ್ಥೈಸಿಬಿಟ್ಟರು!
ತತ್ತ್ವಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿಯ ಧ್ಯೇಯ-ಧೋರಣೆಗಳನ್ನು ಅಲವಡಿಸಿಕೊಳ್ಳುವ ಭರವಸೆ ಹುಟ್ಟಿಸಿದ್ದ ಪಕ್ಷವಾದರೋ ವ್ಯಾವಹರಿಕವಾಗಿ ಧನವಂತರ ಗಾಳಕ್ಕೆ ಬಿದ್ದು, ಅವರ ಮರ್ಜಿಯಂತೆ ಅಡಳಿತದ ಉನ್ನತ ಅಧಿಕಾರಿಗಳನ್ನು ಚದುರಂಗದ ಕುದುರೆ-ಕಲಾಳುಗಳಂತೆ 'ನಡೆಸಿ', ಮಹಾಜನತೆಯನ್ನು, ಕಿವಿಗೆ ಹೂ ಸಿಕ್ಕಿಸಿಕೊಂಡವರೆನಿಸಿಬಿಟ್ಟತು!
ಇಷ್ಟರ ನಡುವೆಯೂ 'ಸಾಚಾ ಬಣ' ಗೆಲ್ಲಲಿ ಎಂದು ಹಾರೈಸಿದ 'ಸಭ್ಯ ಜನತೆ'ಗೂ ಕೊರತೆಯಿಲ್ಲ. ಅದರೆ ಇಲ್ಲಿ ಯಾರೂ ಸೋಲಲಿಲ್ಲ; ಯಾವ ಧ್ಯೇಯೋದ್ದೇಶವೂ ಗೆಲ್ಲಲಿಲ್ಲ! ರಾಜೀಸೂತ್ರದ ಹೆಸರಿನಲ್ಲೀಗ ಧನಬಲದ ಹುಲಿ, ಅಪ್ಪಾವಿತನದ ಹರಕೆ ಕುರಿ, ಅದಕ್ಕಾಗುವಷ್ಟು ಹುಲ್ಲುಹೊರೆಗಳನ್ನು ಒಂದು ವೇದಿಕೆಗೆ ಏರಿಸಲಾಗಿದೆ. ಪರಿಣಾಮವೇನೆನ್ನುವುದಕ್ಕೆ ಭವಿಷ್ಯಗಾರರ ಮುಂದೆ ಹೋಗಿ ಕವಡೆ ಹಾಕಬೇಕೇ!?
ಕರೆಯಬೇಕಾದರೆ ಇದು ಸಂಖ್ಯೆ 9448047559

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ