17 ನವೆಂಬರ್, 2009

ರಾಷ್ಟ್ರೀಯತೆ Vs ಪ್ರಾದೇಶಿಕತೆ

ನವೆಂಬರ‍್ 16, 09

ಸಚಿನ್ ತೆಂಡೂಲ್ಕರ‍್ ರಾಜಕೀಯದ 'ಪಿಚ್‌'ಗೆ ಕಾಲಿರಿಸಬಾರದಂತೆ - ಹಾಗೆಂದು ಮರಾಠಿ "ರಾಜಕೀಯ ಹುಲಿ" ಬಾಳ್ ಠಾಕ್ರೆ ತಾಕೀತು! ತಾಕೀತು ಸರಿಯೇ ಆಗಿದೆ! ರಾಜಕೀಯವೆನ್ನುವುದು, ಹೇಳಿ-ಕೇಳಿ, ಭಂಡರ, ಷಂಢರ, ಗುಂಡಾಗಳ ಆಡುಂಬೊಲ; ಸಭ್ಯರು, ಸಾಧಕರು ಎಂದಿಗೂ ಇಲ್ಲಿಗೆ ಹೋಗುವುದಿಲ್ಲ; "ಹಳೆ ಹುಲಿ"ಗಳು ಅಂಥವರನ್ನು ಸೇರಿಸುವುದೂ ಇಲ್ಲ. ಅದು ಅಂತೆಯೇ ಈ "ಘರ್ಜನೆ"ಯ "ಧ್ವನಿ"! ಆದರೆ ಸಚಿನ್, "ನಾನು ಮಹಾರಾಷ್ಟ್ರೀಯ" ಎಂದು ಹೆಮ್ಮೆಪಟ್ಟಿದ್ದು ರಾಜಕೀಯವೇ? ನಮಗೆ-ನಿಮಗೆ, ಜನಸಾಮಾನ್ಯರಿಗೆ "ಅಲ್ಲ" ಎನಿಸಬಹುದು. ಆದರೆ "ಹಳೆ ಹುಲಿ"ಯ ರಾಜಕೀಯ ಮುಂದಾಲೋಚನೆಗೆ ಅಂಥದು ಕಂಡಿದ್ದರೆ ಆಶ್ಚರ್ಯವೇನು?!
ಸಿದ್ದು, ಕೀರ್ತಿ ಅಜಾದ್ ಪ್ರಭೃತ್ತಿಗಳ ಮಾದರಿಯಲ್ಲಿ, ನಾಳೆ, ಸಚಿನ್ ರಾಜಕಿಯಕ್ಕಿಳಿದರೆ, ಪಟ್ಟಭದ್ರರಿಂದ ಇಳಿಸಲ್ಪಟ್ಟರೆ, ಯಾರೂ ತಡೆಯಬೇಕಾಗಿಲ್ಲ. ನಮ್ಮ ಚಿಂತೆ, ಸಚಿನ್ ತೆಂಡೂಲ್ಕರ‍್ ಅಥವಾ ಬಾಳ್ ಠಾಕ್ರೆ ಎಂಬ ವ್ಯಕ್ತಿ ವಿಶೇಷದ ಬಗ್ಗೆ ಅಲ್ಲ; ರಾಜಕೀಯದ ಕೆಸರಿನಲ್ಲೇ ಹುಟ್ಟಿ, ಅದನ್ನೇ ತಿಂದು ಬೆಳೆಯುವ ಕ್ರಿಮಿಗಳು, ಭಾಷೆ-ಸಂಸ್ಕೃತಿಯಂತಹ ಶುಭ್ರ-ಶ್ವೇತ ಕ್ಷೇತ್ರಗಳಿಗೆ ಸೋಕಿ, ಸೋಂಕು ಹರಡುತ್ತಿವೆಯಲ್ಲ, ಅದಕ್ಕೇನು Antibiotic ಎನ್ನುವುದೇ ಚಿಂತೆ!
ಮುಂಬೈ ಎಲ್ಲರಿಗೂ ಸೇರಿದ್ದು ಎನ್ನುವ ಮಾತಿನಲ್ಲಿ ತಪ್ಪಿಲ್ಲ. ಮುಂಬೈ ಅಷ್ಟೇ ಏನು, ಬೆಂಗಳೂರು, ಚೆನ್ನೈ, ಕೊಲ್ಕೊತ್ತಾಗಳೂ ಅಷ್ಟೆ, ಭಾರತೀಯರಾರಿಗೂ ಮುಚ್ಚಿದ ಬಾಗಿಲಲ್ಲ. ದೇಶದ ಎಲ್ಲಾ ಮಹಾನಗರಗಳೂ, ಅವು ಪ್ರತಿನಿಧಿಸುವ ಇಡೀ ರಾಜ್ಯಗಳೂ "ಅಖಂಡ ಭಾರತ"ದ ಭಾಗಗಳು ಎನ್ನುವುದು ಅಕ್ಷರಶಃ ಸತ್ಯ. ಅದರೆ ಇಂತಹ ಆವೇಶದ ಸನ್ನಿವೇಶದಲ್ಲಿ, ನಾವು, ಅಗತ್ಯಕ್ಕಿಂತಾ ಸ್ವಲ್ಪ ಹೆಚ್ಚಾಗಿಯೇ "ರಾಷ್ಟ್ರನಿಷ್ಠೆ" ಮೆರೆಯಹೋಗುತ್ತೇವೆ; ದೇಶದ ಸಮಗ್ರತೆಯ ಬಗ್ಗೆ ಕಾಳಜಿ ಲೊಚಗುಟ್ಟುತ್ತೇವೆ. ರಾಷ್ಟ್ರ ಭಕ್ತಿ ಒಳ್ಳೆಯದೇ. ಆದರೆ "ಸಾಂಸ್ಕೃತಿಕ ವಿಶಿಷ್ಟತೆ", "ಭಿನ್ನತೆಯಲ್ಲಿ ಏಕತೆ" ಇತ್ಯಾದಿ ಮೂಲಭೂತ ಸತ್ಯಗಳ ಸ್ಮರಣೆಯೂ, ಇಂತಹ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವಾಗುತ್ತದೆ; ವಿವೇಕಕ್ಕೆ ಹಚ್ಚಬೇಕಾಗುತ್ತದೆ. ಅದಿಲ್ಲದಿರುವುದರಿಂದ ಇಂದು ಎನಾಗುತ್ತಿದೆ? ಭಾಷೆ ಮತ್ತು ಅಭಿಮಾನದ ಹೆಸರೆತ್ತಿ ದೊಣ್ಣೆ ಎತ್ತುವ ಠಾಕ್ರೆಗಳಿಗೆ ಹೇಗೆ ಭಾಷೆಯ ಮಹತ್ವದ ಬಗ್ಗೆ ತಾತ್ವಿಕ ಅರಿವಿರುವುದಿಲ್ಲವೋ, ಹಾಗೆಯೇ "ಸಮಗ್ರತೆ" ಎಂಬ ಗುರಾಣಿ ಚಾಚಿ ಮನ್ನುಗುವ ರಾಷ್ಟ್ರ ವೀರರಿಗೂ, "ರಾಷ್ಟ್ರೀಯತೆ" ಎನ್ನುವುದರ ಸತ್ಯವೂ, ನೆಲೆಯೂ, ಬೆಲೆಯೂ ಗೊತ್ತಿರುವುದಿಲ್ಲ. ಘನಘೋರವಾದ ವಾಗ್ಸಮರ ಮಾತ್ರಾ ಫುಂಖಾನುಫುಂಖವಾಗಿ ಮುಂದುವರೆಯುತ್ತದೆ!
ದೇಶದ ಯಾವುದೇ ಭಾಗವೂ ಯಾವುದೇ ನಾಡಿನ ಯಾವ ಪ್ರಜೆಗೂ ತೆರೆದಿಟ್ಟಿರುವ ನೆಲ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ, ನಿಜ. ಆದರೆ ಅಲ್ಲಿ ನೆಲೆ ನಿಂತು ಬದುಕು ಗಿಟ್ಟಿಸುವವರಿಗೆ ಆ ನೆಲದ ಭಾಷೆ, ಸಂಸ್ಕೃತಿ ಮತ್ತು ಇರಸಣಿಕೆಗಳ ಜ್ಞಾನ, ಪರಿಚಯ ಮತ್ತು ಸದ್ಭಾವನೆಗಳು ಅತ್ಯಗತ್ಯವಾಗಿ ಇರಬೇಕಾಗುತ್ತದೆ; ಪ್ರತ್ಯೇಕತೆಯ ಧಿಮಾಕು ಬಿಟ್ಟು ಆ ನೆಲಕ್ಕವರು ನನ್ನಿ ತೋರಬೇಕಾಗುತ್ತದೆ; ಪರಕೀಯರು, ಶಾಶ್ವತವಾಗಿ ಪರಕೀಯರಾಗೇ ಉಳಿಯದೆ, ನೆಲದ ಮಕ್ಕಳೊಂದಿಗೆ ಸೋದರ-ಸೋದರೀ ಭಾವದಿಂದ ಬೆರೆಯಬೇಕಾಗುತ್ತದೆ. ಇದು "ಸಮಗ್ರತೆ". ತಮಿಳು, ಕನ್ನಡ, ಮರಾಠಿ, ಬಂಗಾಳಿ ಇತ್ಯಾದಿ ಸಂಸ್ಕೃತಿ ವಿಶೇಷದಿಂದಲೇ ಸಮಗ್ರ ಭಾರತ ಅಸ್ತಿತ್ವ ಪಡೆಯುವುದು. ಈ ಯಾವುದಾದರೊಂದು ಸಂಸ್ಕೃತಿಯನ್ನು ಸಮಗ್ರವಾಗಿ ಜೀರ್ಣಿಸಿಕೊಳ್ಳಲಾರದ "ಬುದ್ಧಿಸೋಂಬೇರಿ"ಗಳು "ಭಾರತ" ಮತ್ತು "ಭಾರತೀಯತೆ" ಎಂದು ನೆಪಮಾತ್ರದ ಜಪ ಮಾಡುತ್ತಾ "ಖಾಲಿ" ಉಳಿಯುವುದು ಹಾಸ್ಯಾಸ್ಪದವಾಗುತ್ತದೆ!

1 ಕಾಮೆಂಟ್‌:

  1. "ಆದರೆ ಅಲ್ಲಿ ನೆಲೆ ನಿಂತು ಬದುಕು ಗಿಟ್ಟಿಸುವವರಿಗೆ ಆ ನೆಲದ ಭಾಷೆ, ಸಂಸ್ಕೃತಿ ಮತ್ತು ಇರಸಣಿಕೆಗಳ ಜ್ಞಾನ, ಪರಿಚಯ ಮತ್ತು ಸದ್ಭಾವನೆಗಳು ಅತ್ಯಗತ್ಯವಾಗಿ ಇರಬೇಕಾಗುತ್ತದೆ; ಪ್ರತ್ಯೇಕತೆಯ ಧಿಮಾಕು ಬಿಟ್ಟು ಆ ನೆಲಕ್ಕವರು ನನ್ನಿ ತೋರಬೇಕಾಗುತ್ತದೆ; ಪರಕೀಯರು, ಶಾಶ್ವತವಾಗಿ ಪರಕೀಯರಾಗೇ ಉಳಿಯದೆ, ನೆಲದ ಮಕ್ಕಳೊಂದಿಗೆ ಸೋದರ-ಸೋದರೀ ಭಾವದಿಂದ ಬೆರೆಯಬೇಕಾಗುತ್ತದೆ. ಇದು "ಸಮಗ್ರತೆ". ತಮಿಳು, ಕನ್ನಡ, ಮರಾಠಿ, ಬಂಗಾಳಿ ಇತ್ಯಾದಿ ಸಂಸ್ಕೃತಿ ವಿಶೇಷದಿಂದಲೇ ಸಮಗ್ರ ಭಾರತ ಅಸ್ತಿತ್ವ ಪಡೆಯುವುದು"

    Perfect. Can't put it better

    ಪ್ರತ್ಯುತ್ತರಅಳಿಸಿ