05 ನವೆಂಬರ್, 2009

ನ್ಯಾಯಾಂಗದವರ ಆಸ್ತಿ-ಪಾಸ್ತಿ

ಸಾರ್ವಜನಿಕವೆಂಬ ಮಾಧ್ಯಮಗಳ ''ಒತ್ತಡ''ಕ್ಕೆ ಮಣಿದು ಸುಪ್ರೀಂ ನ್ಯಾಯಾಧೀಶರುಗಳು, ಅಂತೂ ''ಸ್ವಯಂಪ್ರೇರಿತ''ರಾಗಿ ತಮ್ಮ ಆಸ್ತಿ-ಪಾಸ್ತಿ ವಿವರಗಳನ್ನು 'ಜಾಲತಾಣ'ದಲ್ಲಿ ಬಯಲುಗೊಳಿಸಿದ್ದಾರೆ. ಇವರ ಪೈಕಿ ಯಾರ ಆಸ್ತಿ ಎಷ್ಟು ಎಂದು ಯಾರು ಬೇಕಾದರೂ ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಸಾರ್ವಜನಿಕರಾರೂ ಪುರುಸೊತ್ತಾಗಿ ಕಂಪ್ಯೂಟರ‍್ ಮುಂದೆ ಕುಳಿತು ಕಂಡವರ ಆಸ್ತಿ ವಿವರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನೊಟ್ಸ್ ಮಾಡಿಕೊಳ್ಲುವುದಿಲ್ಲ. ಇನ್ನೊಬ್ಬರ ಮನೆಯ ಹಾಲು-ಹಣ್ಣು, ತರಕಾರಿ, ಮನೆಬಾಡಿಗೆ ವೆಚ್ಚಗಳನ್ನು ಕಟ್ಟಿಕೊಂಡು ಯಾರಿಗೂ ಏನೂ ಆಗಬೆಕಾದ್ದಿಲ್ಲ. ಜಡ್ಜಾದರೇನು; ಲಾಯರಾದರೇನು; ವರ್ತಕನಾದರೇನು?- ಎಲ್ಲಾರೂ ಮಾಡುವುದು ಹೊಟ್ಟೆಗಾಗಿ; ಗೇಣು ಬಟ್ಟೆಗಾಗಿ! ಆದರೆ ನಮ್ಮಲ್ಲೀಗ ತಾವು ಸ್ವಂತವಾಗಿ ಏನೂ ''ಮಾಡದೇ'' ಇನ್ನೊಬ್ಬರ ಹೊಟ್ಟೆಯ ಮೇಲೆ ಹೊಡೆದು, ಗೇಣು ಬಟ್ಟೆಯನ್ನೂ ಕಿತ್ತುಕೊಂಡು ತಾವು ಧರಿಸಿ, ಇನ್ನೊಬ್ಬರಿಗೂ ಉಡಿಸಿ ಜೈಕಾರ ಹಾಕಿಸಿಕೊಂಡು ದೊಡ್ಡೊಕ್ಕಲಾಗುವ, ಪುಢಾರಿಗಳಾಗುವ ಸೋಬೇರಿಗಳ ಸಂಕುಲ, ದಿನೇ-ದಿನೇ ಹೆಚ್ಚತ್ತಿದೆ; ಕೆಲಸ ಮಾಡದೇ ಆಸ್ತಿ ''ಮಾಡುವುದೇ'' ಜಾಣತನ ಎಂಬ ''ರಾಜಕಾರಣ'' ವ್ಯಾಪಕವಾಗಿ ಸಮಾಜಿಕ ಮೌಲ್ಯವಾಗುತ್ತಿದೆ. ಅದ್ದರಿಂದಲೇ, ಬಲ್ಲ ಮೂಲಗಳಿಗಿಂತಲೂ ಹೆಚ್ಚಿನ ಆಸ್ತಿ ಗೋರಿಹಾಕಿಕೊಂಡಿರುವ ಖದೀಮರನ್ನು ಪತ್ತೆಹಚ್ಚುವ ಮಾಹಿತಿ ಹಕ್ಕಿನ ವ್ಯವಸ್ಥೆಯ, ಪರೋಕ್ಷವಾಗಿ, ''ಯಾವ ಜನರಿಂದ ಎಷ್ಟು ಪ್ರಯೋಜನ'' ಎಂದು ನಿಗದಿಪಡಿಸುವ ''ಸಮಾಜಸೇವೆ''ಯ ''ಆಡಿಟ್‌'' ಸಹ ಆಗಿದೆ!
ಜಡ್ಜ್‌ಗಳಾದಿಯಾಗಿ ಯಾವುದೇ ವೃತ್ತಿಯವರೂ, ಸಮಾಜಿಕ ಕಾರ್ಯಕರ್ತರೂ, ಉದ್ಯಮಿ-ಉದ್ಯೋಗಶಿಲರೂ, ಈಗ ಎಷ್ಟು ಗೆಪ್ಪೆ ಹೊಂದಿದ್ದಾರೆ ಎನ್ನುದಕ್ಕಿಂತಾ ಇದನ್ನವರು ಹೇಗೆ ಗಳಿಸಿದರು; ಎಷ್ಟು ಅವಧಿಯಲ್ಲಿ ಗಳಿಸಿದರು ಎನ್ನುವುದು ಮುಖ್ಯವಾಗುತ್ತದೆ. ಆಯಾ ಕಾಲಘಟ್ಟದಲ್ಲಿ ಅವರು, ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಸಮಾಜಕ್ಕೆ ಎಷ್ಟು ''ಉಪಯುಕ್ತ''ರಾಗಿದ್ದರು ಎನ್ನುವುದಕ್ಕೂ ಈ ಆಸ್ತಿಯ ಗಾತ್ರ ದ್ಯೋತಕವಾಗಬೇಕಾಗುತ್ತದೆ.
ಈ ಬಗ್ಗೆ ಖಚಿತತೆ ಮತ್ತು ತಿಳಿ ಆತ್ಮಸಾಕ್ಷಿಯುಳ್ಳ ''ಮಾನವಪ್ರಾಣಿ''ಗಳು ತಕ್ಷಣ ಸ್ಪಂದಿಸಿ, ತಮ್ಮ ಗಳಿಕೆಯ ಘೋಷಣೆ ಮಾಡಿಕೊಳ್ಳುತ್ತಾರೆ. ಅವರಿಗಾರೋ ''ಲೆಕ್ಕಾಚಾರದ ದುಃಖ''ವಿರುವುದಿಲ್ಲ. ಆದರೆ ತಕರಾರಿರುವುದು ಮಾಜಿ, ಹಾಲೀ, ಭಾವೀ ರಾಜಕಾರಣಿಗಳ ಸಂಬಂಧದಲ್ಲಿ! ಸಾಮಾಜದ ಪ್ರಗತಿಗೆ ಮೂರ್ತಸ್ವರೂಪದ ಯಾವ ಕೊಡುಗೆಯೂ ರಾಜಕಾರಣಿಗಳಿಂದ ಬರುವುದಿಲ್ಲ; ಇವರ ಪೈಕಿ ನೈಜ ಕಳಕಳಿ ಮತ್ತು ''ಬ್ರಿಲಿಯಂಟ್‌ ಐಡಿಯಾ'' ಉಳ್ಳ ಪ್ರತಿಭಾವಂತರು ಬೆರಳೆಣಿಕೆಗೂ ಕಮ್ಮಿಯಿರುತ್ತಾರೆ; ಹೆಚ್ಚಿನ ಸಂಖ್ಯೆಯವರು ಅಲಾಲಟೋಪಿಗಳೇ! ಇವರು ತಮ್ಮ ಅಸ್ತಿತ್ವಕ್ಕಾಗಿ ಬಹತೇಕ ಶಸಕಾಂಗವನ್ನೂ, ಬಹಳ ದೂರದವರೆಗೆ ಕಾರ್ಯಾಂಗ ಮತ್ತು ಆಡಳಿತಶಾಹಿಯನ್ನೂ 'ಕೆಡಿಸಿ''ಟ್ಟುಕೊಂಡಿರುತ್ತಾರೆ. ಭ್ರಷ್ಟಾಚಾರದ ಸಾಗರದ ಮಧ್ಯೆ ನ್ಯಾಯಾಂಗ ಮಾತ್ರಾ ದಿಟ್ಟ ನಡುಗಡ್ಡೆಯಾಗಿ ಉಳಿಯುವುದು ಸಾಧ್ಯವೇ? ಅದರಲ್ಲಿ ಭ್ರಷ್ಟತೆಯ ರಂಧ್ರಗಳೆಷ್ಟು ಎಂದು ಎಣಿಸುವುದಕ್ಕೇನೋ ಮಾಹಿತಿ ಹಕ್ಕಿನ ಈ ವಿಸ್ತರಣೆ ನೆರವಾಗಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರದ ಸಂಪೂರ್ಣ ನಿವಾರಣೆಯ ಪ್ರಯತ್ನ ಯಾವಹಂತದಲ್ಲೂ ಆರಂಭವಾಗಿಲ್ಲವಲ್ಲಾ, ಅದು ಆತಂಕ!
ಆರ‍್. ಕೆ. ದಿವಾಕರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ