12 ನವೆಂಬರ್, 2009

ಮನೆಹಾಡುಗಳ ಆಧ್ಯಾತ್ಮಿಕ ಅನುಭಾವ

ವಿಶಿಷ್ಟ ಸಮುದಾಯದವರು ನಿರ್ದಿಷ್ಟ ಸಂದರ್ಭಗಳಲ್ಲಿ ಹಾಡುವ 'ಸಂಪ್ರದಾಯದ ಹಾಡುಗಳು' ಎಂಬ catagory ಅಲ್ಲಲ್ಲಿ ಉಳಿದುಕೊಂಡಿದೆ. 'ಗೌರಿ ಹಬ್ಬದ ಹಾಡು', 'ಮಂಗಳ ಗೌರಿ ಹಾಡು', ಐದು 'ಶುಕ್ರವಾರದ ಹಾಡು' - ಇತ್ಯಾದಿ, ಇತ್ಯಾದಿಗಳು ಪುಸ್ತಕ ಮಾರಾಟದ ಹಳೆ ಅಂಗಡಿಗಳಲ್ಲಿ ಅಚ್ಚಿನಲ್ಲೂ ಸಿಗುತ್ತವೆ. ಇವೆಲ್ಲಾ ಆಯಾಯಾ ದಿನವಿಶೇಷದ ಶಾಸ್ತ್ರ-ಸಂಪ್ರದಾಯಗಳಿಗೆ ಸಂಬಂಧಪಟ್ಟವು. ಹಬ್ಬದ ಸಾಧನ-ಸಲಕರಣೆ ಮತ್ತು ಕ್ರಿಯಾ-ಕಲಾಪಗಳಿಗೂ ಈ ಹಾಡೇ ಆಧಾರವಾಗಿರುವುದುಂಟು. ಉದಾಹರಣೆಗೆ ನಾಗರಚೌತಿ ಹಾಡಿನಲ್ಲಿ, ಜಾನಪದ ಕಥಾ ನಾಯಕಿ, 'ಒಂದು ಕೇದಿಗೆಯೊಳಗೆ ಹೊಂದಿಕೊಡಿಹ ಶೇಷ' ಕಚ್ಚಿ ಸತ್ತ ತನ್ನಣ್ಣನಿಗೆ ಮರುಜೀವ ನೀಡಲು, 'ನೆನೆಯಕ್ಕಿ, ನೆನೆ ಕಡಲೆ, ಕೊನೆಯ ಬಾಳೆಹಣ್ಣು' ತೆಕ್ಕೊಂಡು ಹುತ್ತದತ್ತ ನಡೆಯುತ್ತಾಳೆ. ಇಂದು ಸಹ ಚೌತಿ ನಾಗಪ್ಪನಿಗೆ ಈ ವಸ್ತುಗಳೆ ನೈವೇದ್ಯ!
ಇವು 'ಹೆಚ್ಚುಕಟ್ಟಳೆ ಹಾಡುಗಳು' ಆದರೆ ಇವೇ ಅಲ್ಲದೆ, ಹಳೆಕಾಲದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು, ನೂರಾರು ಸಂಖ್ಯೆಯಲ್ಲಿ 'ನಿತ್ಯಕಟ್ಟಳೆ ಹಾಡು'ಗಳನ್ನೂ ಹೇಳಿಕೊಳ್ಳುತ್ತಿದ್ದದ್ದೂ ಉಂಟು. ಇವುಗಳು ಅಚ್ಚಿನಲ್ಲಿ ಸಿಗುವುದಿರಲಿ, ಬಹುತೇಕ ಯಾರು ಮಾಡಿದ್ದರೆಂಬ ಸುಳಿವೂ ಸಿಕ್ಕುವುದಿಲ್ಲ. ಅಂದಮಾತ್ರಕ್ಕೆ ಇವೆಲ್ಲಾ ಕಾಕರೀ-ಬೀಕರಿ ಕಾಟಾಚರದವೆಂದಲ್ಲ. ಅನುಸಂಧಾನಪೂರ್ವಕವಾಗಿ ಅಂದುಕೊಂಡರೆ ಉನ್ನತ ಆಧ್ಯಾತ್ಮಿಕ ಅನುಭಾವ ಉಂಟುಮಾಡುವ ಅಂತರ್ಗತ ಸಾಮಾರ್ಥ್ಯವೂ ಇವುಗಳಿಗುಂಟು. (ಗದ್ಯ) ''ಅನಂತಕಲ್ಯಾಣ ಗುಣಪರಿಪೂರ್ಣ, ಅನಂತಾನಮತೋತ್ತಮ, ನಿಮ್ಮ ವಸ್ತು-ನೀವು ಕೊಟ್ಟಂಥಾದ್ದು / ತೈಲದಲ್ಲಿ-ಕಾಂತೀಲಿ ಲಕ್ಷ್ಮೀದೇವೀರ ಸನ್ನಿಧಾನ/ ಪಾತ್ರೇಲಿ ಬ್ರಹ್ಮ ದೇವರ ಸನ್ನಿಧಾನ/ ಬತ್ತೀಲಿ ಇಂದ್ರ ದೇವರ ಸನ್ನಿಧಾನ/ ಕಪ್ಪಿನಲ್ಲಿ ರುದ್ರ ದೇವರ ಸನ್ನಿಧಾನ/ ಕೆಂಪಿನಲ್ಲಿ ಸಂಕರ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ ದೇವರ ಸನ್ನಿಧಾನ/ ಇಷ್ಟೂ ಮಂದಿ ಉರ್ಧ್ವಮೂರ್ತಿಯಾಗಿ ನಿಂತಿದ್ದೀರಿ- ಒಳ್ಳೆಯವರಲ್ಲಿ ತಾರತಮ್ಯ ಜ್ಞಾನ ಕೊಟ್ಟು, ನಾ ಹಚ್ಚಿಟ್ಟಂಥಾ ದೀವಿಗೆ ನಿಮ್ಮ ಪಾದಕ್ಕೆ ಸಂಕರಿಸಲಿ- ಇತಿ ಜ್ಯೋತಿ ಸ್ತೋತ್ರ ಸಂಪೂರ್ಣಂ ಶ್ರೀಕೃಷ್ಣಾರ್ಪಣಮಸ್ತು//'' ಎಂದು ಹೇಳಿಕೊಂಡು ದೀಪ ಹಚ್ಚುವುದರಲ್ಲೇ ಭಾವುಕರು ಯೋಗಾನುಭವ ಹೊಂದುವುದು ಸಾಧ್ಯವಾಗಲರದೇ? ಅಂತೆಯೇ 'ನಾರಾಯಣ ನಿಮ್ಮ ನಾಮವ ನೆನೆದು, ನಾಲಗೆ ತುದಿಯಲಿ ಅಮೃತವನೆರೆದು/ ರಾಮನಾಮವೆಂಬೊ ಸ್ವಾದವ ತಿಳಿದು/ ಅಬ್ಜದ ನಾಭನ ಭಕ್ತಿಗೆ ಮೆಚ್ಚಿ ಅನಂತಪುರುಷನ ಗುಣಕಥೆ ಕೇಳಿ... ಎಂದು ಸುಲಲಿತವಾಗಿ ಮುಂದೆ ಸಾಗುವ ಪದ್ಯ, 'ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ' ಎಂಬ ಪ್ರಸಿದ್ಧ ಶಿವಮಾನಸ ಪೂಜೆಯ ಎಲ್ಲಾ ಆಯಾಮಗಳನ್ನೂ ಒಳಗೊಂಡು, ಗೃಹಕೃತ್ಯದ ಮಜಲುಗಳಲ್ಲೇ ನಾರಯಣನ ಅರಾಧನೆ ಪೂರೈಸುವ ಚಮತ್ಕಾರ ಒಳಗೊಂಡಿದೆ!
ಇಂತಹ ನೂರಾರು ಹಾಡುಗಳನ್ನು ನಮ್ಮಮ್ಮ ದಿನನಿತ್ಯ ಹೇಳಿಕೊಳ್ಳುತ್ತಿದ್ದರು. ಆಗೆಲ್ಲಾ ಇದು ನಮಗೆ Routine ಎನಿಸಿಹೋಗಿತ್ತು. ಈಗ ಆ ಪೈಕಿ ಐದಾರು ಮಾತ್ರಾ ಜ್ಞಾಪಕ ಇದೆ!
ಈ ಹಾಡುಗಳು ವಯಸ್ಸಾದವರ 'ಕಗ್ಗ' ಅಲ್ಲ. ಇವೆಲ್ಲಾ 'ಶಾಲು ಪಾಂಡಿತ್ಯ'ದ ಓದಿನಿಂದಲೇ ಮೂಡಿ ಬಂದದ್ದೂ ಅಲ್ಲ. ಅನುಭಾವಿಗಳು ಅನುಭವಿಸಿ ಹೇಳಿ ಹೋದ ಈ ನೈಜ ಆಧ್ಯಾತ್ಮಿಕ ಸಂಪತ್ತು, ಇದು! ಇದನ್ನು ಮುಂದಿನವರಿಗಾಗಿ ಅಷ್ಟಿಷ್ಟಾದರೂ ಉಳಿಸಿಟ್ಟುಕೊಳ್ಳುವುದು ಒಳ್ಳೆಯದು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ