26 ಅಕ್ಟೋಬರ್, 2009

"ಲವ್ ಜಿಹಾದ್ ತನಿಕೆ"-

ಅಕ್ಟೋಬರ‍್ 27, 2009
"ಲವ್‌ ಜಿಹಾದ್" ಪೊಲೀಸ್ ತನಿಖೆ ಸ್ವಾಗತಾರ್ಹ
ಮತಾಂತರದ ಇನ್ನೊಂದು ಅಷಡ್ಡಾಳವಾದ "ಲವ್‌ ಜಿಹಾದ್" ಬಗ್ಗೆ ರಾಜ್ಯ ಸರಕಾರ ಪೊಲೀಸ್ ತನಿಖೆ ಕೈಗೊಂಡಿರುವುದು ಸ್ವಾಗತಾರ್ಹ ಕ್ರಮ. ಆದರೆ ಇದರ ಫಲಶೃತಿ ಪೂರ್ವನಿರ್ಧಾರವೆಂಬಂತೆ, ಅಧಿಕಾರಸ್ಥರ ಪೂರ್ವಗ್ರಹವನ್ನಷ್ಟೇ ಎತ್ತಿಹಿಡಿಯಬಾರದು. ಲಾಗಾಯ್ತಿನಿಂದ ನಡೆದುಬಂದಿರುವ ಮತಾಂತರದ ಕುತಂತ್ರಕ್ಕೆ, "ಲವ್ ಜಿಹಾದ್" ಒಂದು ಹೊಸ Innovation ಅಷ್ಟೆ! ಒಟ್ಟಾರೆ ಮತಾಂತರದ ಉದ್ದೇಶ, ಅದರ ಲಾಭನಷ್ಟಗಳ ರಾಜಕೀಯ ಮತ್ತು ಇದಕ್ಕಾಗಿ ಗುಪ್ತವಾಗಿ, ಪ್ರಕಟವಾಗಿ ನಡೆಯುವ ಸಂಘಟನಾ ಕಾರ್ಯವೈಖರಿ ಬಗ್ಗೆ, ಸಮಿತಿ, ವ್ಯಾಪಕ ಸಂಶೋಧನೆ ನಡೆಸಿ ಪ್ರಾಮಾಣಿಕ ವರದಿ ನೀಡುವುದಾದರೆ ಇಡೀ ದೇಶವೇ ನೈತಿಕ, ಸಾಮಾಜಿಕ ಪಿಡಗೊಂದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಹಾಯವಾದೀತು!
ಜನಸಾಮನ್ಯರ ಮಟ್ಟದಲ್ಲಿ, ಮತ ಮತ್ತು ಮತಾಂತರ "ಮಂಕುಬೂದಿ" ಮಾತ್ರಾ. ಅದನ್ನು ಎರಚುವವರು ಕುತಂತ್ರೀ ಪಟ್ಟಭದ್ರರು. ರಾಜಕಾರಣಿಗಳು ಒಟ್ಟಾರೆಯಾಗಿ ಕುತಂತ್ರಿಗಳೂ ಹೌದು; ಪಟ್ಟಭದ್ರರೂ ಹೌದು.ಸಮಾಜವನ್ನು ಒಡೆಯುವುದು; Winning margin ವೋಟು ಬಾಚಿಕೊಳ್ಳುವುದು; ಅಷ್ಟೇ ಅವರ ನೀತಿ-ಧರ್ಮ-ಸೂತ್ರ-ಸಂಹಿತೆಗಳೆಲ್ಲಾ. ಮೂರ್ಖ ಜನರ ಮತಿಗೆ ಬತ್ತಿಯಿಟ್ಟು, ಹುಚ್ಚೆಬ್ಬಿಸಿ ಆ ಕಿಚ್ಚಿನಲ್ಲವರು ಸುಲಭವಾಗಿ ತಮ್ಮ ಬೇಳೆ ಬೇಸಿಕೊಳ್ಳುತ್ತಾರೆ. ಒಂದುಕಡೆಯವರು, Fairnessಗೆ ತಿಲಂಜಲಿಯಿತ್ತು ಅಲ್ಪಸಂಖ್ಯಾತರನ್ನು ಓಲೈಸಿಕೊಂಡರೆ, ಇನ್ನೊಂದು ಬದಿಯವರು ಅವರಲ್ಲಿ ಭೀತಿ, ಅಸುರಕ್ಷಿತಾಭಾವ ಹುಟ್ಟಿಸಿ ಬಹುಸಂಖ್ಯಾತರಿಂದ "ಭೇಷ್‌" ಎನಿಸಿಕೊಳ್ಳುವ ಹುನ್ನಾರ ಹೂಡುತ್ತಾರೆ. ವಾಸ್ತವವಾಗಿ ಇಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎನ್ನುವುದೇ ಮಿಥ್ಯೆ. ಅವರೆಲ್ಲಾ ಇದೇ ದೇಶದ ಹಳ್ಳಿ-ಹಳ್ಳಿಗಳ ಮಣ್ಣಿನಲ್ಲೇ ಹುಟ್ಟಿಬೆಳೆದವರು; ಮೂಲಭೂತವಾಗಿ ಒಂದೇ ಸಂಸ್ಕೃತಿ-ಆಚಾರಗಳನ್ನೂ, ಸಾಮಾಜಿಕತೆಯನ್ನೂ ಭೌತ ಪರಿಸರವನ್ನೂ ಹಂಚಿಕೊಂಡವರು! ಭಾರತೀಯರಾದವರಿಗೆ ಒಂದು ಭಾರತ ದೇಶವಿದೆ. ಹೇಳಿ, ಮುಸಲ್ಮಾನರಿಗಾಗಲೀ, ಕ್ರಿಶ್ಚಿಯನ್ನರಿಗಾಗಲೀ ವಿಶಿಷ್ಟ ರಾಷ್ಟ್ರೀಯತೆ ಕರುಣಿಸುವ ಒಂದು ದೇಶವಿದೆಯೇ?
ರಾಜ್ಯ ಸರಕಾರವೊಂದರ ಉನ್ನತೋನ್ನತ ಅಧಿಕಾರಿಗಳ ಸಮಿತಿ ಇಷ್ಟು ವಿಶಾಲವಾಗಿ ಆಲೋಚಿಸಬಲ್ಲ ಸಾಮರ್ಥ್ಯವನ್ನಾಗಲೀ, ಸ್ವಾತಂತ್ಯ್ರವನ್ನಾಗಲೀ ಹೊಂದಿರಬಹುದೇ?
ಆರ‍್. ಕೆ ದಿವಾಕರ
ಕರೆ: 9448047559 ವಿ-ಅಂಚೆ
ಬ್ಲಾಗ್‌

2 ಕಾಮೆಂಟ್‌ಗಳು:

  1. "ಲವ್‌ ಜಿಹಾದ್" ಹೆಸರೇ ಅಸಹ್ಯ ಹುಟ್ಟಿಸುತ್ತದೆ. ಈ ('ಧರ್ಮ'ರಾಜಕೀಯ) ಪರಿಕಲ್ಪನೆಯನ್ನು ಹುಟ್ಟುಹಾಕಿದ ಮನಸು (ಅದು 'ಈ'ಕಡೆಯಿರಲಿ 'ಆ'ಕಡೆಯಿರಲಿ) ಅದೆಷ್ಟು ಹೊಲಸುಗೆಟ್ಟಿರಬೇಕು! ಇನ್ನು ಈ ಪುಂಡಾಟಕ್ಕೆ ಅದೆಷ್ಟು ಎಳೆಜೀವ/ಜೀವನಗಳು ಬಲಿಯಾಗಬೇಕೋ. "ದೊಡ್ಡವರೆ"ನ್ನಿಸಿಕೊಂಡವರಿಗೆ ಒಂದಿಷ್ಟಾದರೂ ಕಳಕಳಿಯಿದೆಯೇ?

    ಪ್ರತ್ಯುತ್ತರಅಳಿಸಿ
  2. 'ಧರ್ಮ'ರಾಜಕೀಯವೆಂಬ ನುಡಿಗಟ್ಟಿಗೆ ಅರ್ಥವೇಇಲ್ಲ. ಈಗಿನ ವ್ಯವಹಾರದಲ್ಲಿ ರಾಜಕೀಯವೆನ್ನುವುದಕ್ಕೆ ಧರ್ಮದ ಸಂಬಂಧವೇ ಇಲ್ಲ. ಅದು ಸ್ವಾರ್ಥ, ದೂರ್ತ ಮತ್ತು ಸಂಬಂಧನಾಶಿ. ಧರ್ಮವಾದರೋ ಬದುಕುವ, ಬದುಕ ಬಿಡುವ ಕಲೆ. 'ಲವ್ ಜಿಹಾದ್ ಕಾರರು' ರಕ್ಕಸ ರಾಜಕಾರಣಿಗಳೇ ಹೊರತು ಯಾವ ಕಾರಣಕ್ಕೂ ಧಾರ್ಮಿಕರಲ್ಲ

    ಪ್ರತ್ಯುತ್ತರಅಳಿಸಿ