21 ನವೆಂಬರ್, 2009

ನಕ್ಸಲರೂ , ಉಗ್ರರೂ

ನವೆಂಬರ್ 21, 09

ರೈಲುಗಳನ್ನು ಉರುಳಿಸುವುದು, ಮೊಬೈಲ್ ಗೋಪುರಗಳಿಗೆ ಬೆಂಕಿ ಹಚ್ಚುವುದು, ಪೊಲಿಸ್‌ ಮಾಹಿತಿದಾರರೆಂದು ಆರೋಪಿಸಿ, ನಿರಾಯುದ ಜನಗಳನ್ನು ಬೇಟೆಯಾಡುವುದು ಇತ್ಯಾದಿ ಚಟುವಟಿಕೆಗಳನ್ನು ನೋಡಿ, ಕೇಂದ್ರ ಗೃಹಕಾರ್ಯದರ್ಶಿ ತಲೆಗೆಟ್ಟು, ನಕ್ಸಲರೆನ್ನುವವರಿಗೂ, ಭಯೋತ್ಪಾದಕರಿಗೂ ವ್ಯತ್ಯಾಸವೇನೆಂದು ಗಲಿಬಿಲಿಗೊಂಡಿದ್ದಾರೆ. ಒಟ್ಟಿನಲ್ಲಿದು ದಿಢೀರ‍್ ಹಿಂಸಾಚಾರ; ಪರಿಣಾಮ? ಸಮನ್ಯ ಜನರಲ್ಲಿ "ಭಯೋತ್ಪಾದನೆ" ಹಾಗಾದರೆ ಈ ಎರಡೂ ರೀತಿಯ ಸಮಾನ ಅನಿಷ್ಟಗಳನ್ನು ಬೇರೆ ಬೇರೆ ಸ್ಟ್ಯಾಂಡರ್ಡ್‌ಗಳಲ್ಲಿ ನೋಡುವುದು ಹೇಗೆ ಎನ್ನುವುದು ಆ ಉನ್ನತ ಅಧಿಕಾರಿಯ ತಲೆಬಿಸಿ. ಆದರೆ ತಾತ್ವಿಕವಾಗಿ ನಕ್ಸಲರಿಗೂ ಉಗ್ರರಿಗೂ ವ್ಯತ್ತಾಸವಿದೆ. ಭಯೊತ್ಪಾದಕರು, ಉದಾತ್ತವಾದ ಯಾವ ಧ್ಯೇಯ-ಧೋರಣೆಯನ್ನೂ ನೆಪಮಾತ್ರಕ್ಕೂ ಹೊಂದಿರುವುದಿಲ್ಲ; ಅವರು ಹೇಳಿ-ಕೇಳಿ ಕೇವಲ ಫ್ರೀಲಾನ್ಸ್ ಬಾಡಿಗೆ ಹಂತಕರು ಇಂಥವರ ರಕ್ಕಸ ಕೃತ್ಯಗಳಿಗೆ ಜನ ಹೆದರುತ್ತರೆನೋ ಹೌದು ಅದರೆ ಆಶ್ಚರ್ಯಪಡುವುದಿಲ್ಲ. ಆದರೆ ನಕ್ಸಲರಿಗಾದರೋ ಸಮಾಜಮುಖೀ ಕಳಕಳಿ ಮತ್ತು ನಿಲವುಗಳುಂಟೆಂಬ ನಂಬಿಕೆ, ಒಂದು ಬುದ್ಧಿವರ್ಗದಲ್ಲಾದರೂ ಇಂದಿಗೂ ಇಲ್ಲದಿಲ್ಲ!
ನಕ್ಸಲರೆಂಬ ಆಯುಧಪಾಣಿಗಳು ಪ್ರಸ್ತುತದ ಆಡಳಿತ ವ್ಯವಸ್ಥೆಯಿಂದ ಮನರೋಸಿಹೋದವರಿರಬಹುದು; ಜನತೆಯನ್ನೂ, ಆಡಳಿತವನ್ನೂ ಜಾಗೃತಗೊಳಿಸುವ ಹತಾಶ ಪ್ರಯತ್ನವಾಗಿ, ಸಾಂಕೇತಿಕವಾಗಿ, ಇವರು ಒಂದೆರಡು ಹಿಂಸಾಚಾರದ ಕೃತ್ಯಗಳನ್ನೂ ಎಸಗಿರಬಹುದು. ಅಂಥದು ಅಕ್ಷಮ್ಯ ಅಪರಾಧ ಎಂದೂ ಅನ್ನಿಸುತ್ತಿರಲಿಲ್ಲ. ಆದರೆ ಈಗ ಮಾವೋವಾದಿಗಳದ್ದೆಂದು ಹೇಳಲಾಗುತ್ತಿರುವ ಹಿಂಸಾಚಾರದ ಪ್ರಮಾಣ ಮತ್ತು ಈಡುಗಾರಿಕೆಯನ್ನು ನೋಡಿದರೆ, ಇವರೂ ಸಹ ಭಯೋತ್ಪಾದಕರಂತೆ, ಇದನ್ನು ಒಂದು ವೃತ್ತಿಯಾಗಿ ಕೈಗೊಂಡಿದ್ದಾರೆಯೋ ಎನಿಸುತ್ತದೆ; ಹಾಗಿದ್ದಲ್ಲಿ ಇವರನ್ನು ಸಹ ಸಮಾಜದ್ರೋಹೀ ಲೂಟಿಕೋರರು ಬಾಡಿಗೆಗೆ ಹಿಡಿದಿರಬಹುದೆಂಬ ಅನುಮಾನಕ್ಕೊಂದು ಎಳೆಯೂ ಸಿಗುತ್ತದೆ!
ಅಂತಹ ದುರಂವೇನೂ ಉಂಟಾಗಿರದಿದ್ದರೆ, ಆ ಬಗ್ಗೆ ಸ್ಪಷ್ಟೀಕರಣ ನಿಡಬೇಕಾದ ಜವಾಬ್ದಾರಿ ಮಾವೋವಾದೀ ಸಂಘಟನೆಗಳ ಮುಖಂಡರಮೇಲಿರುತ್ತದೆ; ಮತ್ತು ಈ ಸಂಘಟನೆಗಳು ತಮ್ಮ ಸಾಮಾಜಿಕ ನೀತಿ-ನಿಲವುಗಳನ್ನು ಸಮಾಜಕ್ಕೆ ಮನದಟ್ಟುಮಾಡಿಸುವ ಜವಾಬ್ದಾರಿಯಲ್ಲಿ ಸೋತಿರುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ!
ಆರ್. ಕೆ. ದಿವಾಕರ
"ದಿವ್ಯವು" 335 ಎರಡನೇ ಮುಖ್ಯರಸ್ತೆ
ಲಕ್ಷ್ಮೀಪರ ಬೆಂಗಳೂರು-590019
ಕರೆ:9448047559
ವಿ-ಅಂಚೆ

19 ನವೆಂಬರ್, 2009

Did U see Shobhade's eulogies for Sachin?

(@shobhaade.blogspot.com)
All her attributes to a man, Supreme in Cricket and outside the Cricket world, as far her observations, may be reasonable. But the 'Mubaikar issue' that coiled onto him, has larger significance than being a mere comparison between him and a "tiger", political. Obviously, no politician, as a rank, self-seeking, socially worthless, could ever match with an achiever of sacin's calibre. This point needs no elaboration. But his statement, "Mumbai belongs to all Indians", though a "Constitutional truth", needs to be examined broadly. Mumbai may belong to everybody. But should not somebody belong to Mumbai, as thoroughly as to live-by and conserve all its characteristics?
Mumbai, Chennai, Bangalore and many others aren't cities, merely meant to offer jobs and livelihood to anybody fleeing from homes. Besides, they value their own culture, tradition and distinct ways of living that add unique colours, fragrance and flavours to life. People coming in search of a living and finding it in abundance, somewhere, should try to accept and appreciate its cultural spirit, as well. On the other hand, if they try to perpetuate their separateness and fight for it as their right, they will be contaminating the cultural atmosphere of the land, gives them a peaceful asylum!
''Indianness'' exists only as a blend of ''Marathiness'', ''Kanndaness'', ''Bengaliness'' and so on. It remains incomplete if any one of these is mistreated!

17 ನವೆಂಬರ್, 2009

ರಾಷ್ಟ್ರೀಯತೆ Vs ಪ್ರಾದೇಶಿಕತೆ

ನವೆಂಬರ‍್ 16, 09

ಸಚಿನ್ ತೆಂಡೂಲ್ಕರ‍್ ರಾಜಕೀಯದ 'ಪಿಚ್‌'ಗೆ ಕಾಲಿರಿಸಬಾರದಂತೆ - ಹಾಗೆಂದು ಮರಾಠಿ "ರಾಜಕೀಯ ಹುಲಿ" ಬಾಳ್ ಠಾಕ್ರೆ ತಾಕೀತು! ತಾಕೀತು ಸರಿಯೇ ಆಗಿದೆ! ರಾಜಕೀಯವೆನ್ನುವುದು, ಹೇಳಿ-ಕೇಳಿ, ಭಂಡರ, ಷಂಢರ, ಗುಂಡಾಗಳ ಆಡುಂಬೊಲ; ಸಭ್ಯರು, ಸಾಧಕರು ಎಂದಿಗೂ ಇಲ್ಲಿಗೆ ಹೋಗುವುದಿಲ್ಲ; "ಹಳೆ ಹುಲಿ"ಗಳು ಅಂಥವರನ್ನು ಸೇರಿಸುವುದೂ ಇಲ್ಲ. ಅದು ಅಂತೆಯೇ ಈ "ಘರ್ಜನೆ"ಯ "ಧ್ವನಿ"! ಆದರೆ ಸಚಿನ್, "ನಾನು ಮಹಾರಾಷ್ಟ್ರೀಯ" ಎಂದು ಹೆಮ್ಮೆಪಟ್ಟಿದ್ದು ರಾಜಕೀಯವೇ? ನಮಗೆ-ನಿಮಗೆ, ಜನಸಾಮಾನ್ಯರಿಗೆ "ಅಲ್ಲ" ಎನಿಸಬಹುದು. ಆದರೆ "ಹಳೆ ಹುಲಿ"ಯ ರಾಜಕೀಯ ಮುಂದಾಲೋಚನೆಗೆ ಅಂಥದು ಕಂಡಿದ್ದರೆ ಆಶ್ಚರ್ಯವೇನು?!
ಸಿದ್ದು, ಕೀರ್ತಿ ಅಜಾದ್ ಪ್ರಭೃತ್ತಿಗಳ ಮಾದರಿಯಲ್ಲಿ, ನಾಳೆ, ಸಚಿನ್ ರಾಜಕಿಯಕ್ಕಿಳಿದರೆ, ಪಟ್ಟಭದ್ರರಿಂದ ಇಳಿಸಲ್ಪಟ್ಟರೆ, ಯಾರೂ ತಡೆಯಬೇಕಾಗಿಲ್ಲ. ನಮ್ಮ ಚಿಂತೆ, ಸಚಿನ್ ತೆಂಡೂಲ್ಕರ‍್ ಅಥವಾ ಬಾಳ್ ಠಾಕ್ರೆ ಎಂಬ ವ್ಯಕ್ತಿ ವಿಶೇಷದ ಬಗ್ಗೆ ಅಲ್ಲ; ರಾಜಕೀಯದ ಕೆಸರಿನಲ್ಲೇ ಹುಟ್ಟಿ, ಅದನ್ನೇ ತಿಂದು ಬೆಳೆಯುವ ಕ್ರಿಮಿಗಳು, ಭಾಷೆ-ಸಂಸ್ಕೃತಿಯಂತಹ ಶುಭ್ರ-ಶ್ವೇತ ಕ್ಷೇತ್ರಗಳಿಗೆ ಸೋಕಿ, ಸೋಂಕು ಹರಡುತ್ತಿವೆಯಲ್ಲ, ಅದಕ್ಕೇನು Antibiotic ಎನ್ನುವುದೇ ಚಿಂತೆ!
ಮುಂಬೈ ಎಲ್ಲರಿಗೂ ಸೇರಿದ್ದು ಎನ್ನುವ ಮಾತಿನಲ್ಲಿ ತಪ್ಪಿಲ್ಲ. ಮುಂಬೈ ಅಷ್ಟೇ ಏನು, ಬೆಂಗಳೂರು, ಚೆನ್ನೈ, ಕೊಲ್ಕೊತ್ತಾಗಳೂ ಅಷ್ಟೆ, ಭಾರತೀಯರಾರಿಗೂ ಮುಚ್ಚಿದ ಬಾಗಿಲಲ್ಲ. ದೇಶದ ಎಲ್ಲಾ ಮಹಾನಗರಗಳೂ, ಅವು ಪ್ರತಿನಿಧಿಸುವ ಇಡೀ ರಾಜ್ಯಗಳೂ "ಅಖಂಡ ಭಾರತ"ದ ಭಾಗಗಳು ಎನ್ನುವುದು ಅಕ್ಷರಶಃ ಸತ್ಯ. ಅದರೆ ಇಂತಹ ಆವೇಶದ ಸನ್ನಿವೇಶದಲ್ಲಿ, ನಾವು, ಅಗತ್ಯಕ್ಕಿಂತಾ ಸ್ವಲ್ಪ ಹೆಚ್ಚಾಗಿಯೇ "ರಾಷ್ಟ್ರನಿಷ್ಠೆ" ಮೆರೆಯಹೋಗುತ್ತೇವೆ; ದೇಶದ ಸಮಗ್ರತೆಯ ಬಗ್ಗೆ ಕಾಳಜಿ ಲೊಚಗುಟ್ಟುತ್ತೇವೆ. ರಾಷ್ಟ್ರ ಭಕ್ತಿ ಒಳ್ಳೆಯದೇ. ಆದರೆ "ಸಾಂಸ್ಕೃತಿಕ ವಿಶಿಷ್ಟತೆ", "ಭಿನ್ನತೆಯಲ್ಲಿ ಏಕತೆ" ಇತ್ಯಾದಿ ಮೂಲಭೂತ ಸತ್ಯಗಳ ಸ್ಮರಣೆಯೂ, ಇಂತಹ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವಾಗುತ್ತದೆ; ವಿವೇಕಕ್ಕೆ ಹಚ್ಚಬೇಕಾಗುತ್ತದೆ. ಅದಿಲ್ಲದಿರುವುದರಿಂದ ಇಂದು ಎನಾಗುತ್ತಿದೆ? ಭಾಷೆ ಮತ್ತು ಅಭಿಮಾನದ ಹೆಸರೆತ್ತಿ ದೊಣ್ಣೆ ಎತ್ತುವ ಠಾಕ್ರೆಗಳಿಗೆ ಹೇಗೆ ಭಾಷೆಯ ಮಹತ್ವದ ಬಗ್ಗೆ ತಾತ್ವಿಕ ಅರಿವಿರುವುದಿಲ್ಲವೋ, ಹಾಗೆಯೇ "ಸಮಗ್ರತೆ" ಎಂಬ ಗುರಾಣಿ ಚಾಚಿ ಮನ್ನುಗುವ ರಾಷ್ಟ್ರ ವೀರರಿಗೂ, "ರಾಷ್ಟ್ರೀಯತೆ" ಎನ್ನುವುದರ ಸತ್ಯವೂ, ನೆಲೆಯೂ, ಬೆಲೆಯೂ ಗೊತ್ತಿರುವುದಿಲ್ಲ. ಘನಘೋರವಾದ ವಾಗ್ಸಮರ ಮಾತ್ರಾ ಫುಂಖಾನುಫುಂಖವಾಗಿ ಮುಂದುವರೆಯುತ್ತದೆ!
ದೇಶದ ಯಾವುದೇ ಭಾಗವೂ ಯಾವುದೇ ನಾಡಿನ ಯಾವ ಪ್ರಜೆಗೂ ತೆರೆದಿಟ್ಟಿರುವ ನೆಲ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ, ನಿಜ. ಆದರೆ ಅಲ್ಲಿ ನೆಲೆ ನಿಂತು ಬದುಕು ಗಿಟ್ಟಿಸುವವರಿಗೆ ಆ ನೆಲದ ಭಾಷೆ, ಸಂಸ್ಕೃತಿ ಮತ್ತು ಇರಸಣಿಕೆಗಳ ಜ್ಞಾನ, ಪರಿಚಯ ಮತ್ತು ಸದ್ಭಾವನೆಗಳು ಅತ್ಯಗತ್ಯವಾಗಿ ಇರಬೇಕಾಗುತ್ತದೆ; ಪ್ರತ್ಯೇಕತೆಯ ಧಿಮಾಕು ಬಿಟ್ಟು ಆ ನೆಲಕ್ಕವರು ನನ್ನಿ ತೋರಬೇಕಾಗುತ್ತದೆ; ಪರಕೀಯರು, ಶಾಶ್ವತವಾಗಿ ಪರಕೀಯರಾಗೇ ಉಳಿಯದೆ, ನೆಲದ ಮಕ್ಕಳೊಂದಿಗೆ ಸೋದರ-ಸೋದರೀ ಭಾವದಿಂದ ಬೆರೆಯಬೇಕಾಗುತ್ತದೆ. ಇದು "ಸಮಗ್ರತೆ". ತಮಿಳು, ಕನ್ನಡ, ಮರಾಠಿ, ಬಂಗಾಳಿ ಇತ್ಯಾದಿ ಸಂಸ್ಕೃತಿ ವಿಶೇಷದಿಂದಲೇ ಸಮಗ್ರ ಭಾರತ ಅಸ್ತಿತ್ವ ಪಡೆಯುವುದು. ಈ ಯಾವುದಾದರೊಂದು ಸಂಸ್ಕೃತಿಯನ್ನು ಸಮಗ್ರವಾಗಿ ಜೀರ್ಣಿಸಿಕೊಳ್ಳಲಾರದ "ಬುದ್ಧಿಸೋಂಬೇರಿ"ಗಳು "ಭಾರತ" ಮತ್ತು "ಭಾರತೀಯತೆ" ಎಂದು ನೆಪಮಾತ್ರದ ಜಪ ಮಾಡುತ್ತಾ "ಖಾಲಿ" ಉಳಿಯುವುದು ಹಾಸ್ಯಾಸ್ಪದವಾಗುತ್ತದೆ!

13 ನವೆಂಬರ್, 2009

ದೇಶದಲ್ಲಿ ಬಿಜೆಪಿ ಬದುಕಿರುತ್ತಿದ್ದರೆ......

powerful ರೆಡ್ಡಿ ಸಚಿವರೊಬ್ಬರ ಪ್ರಕಾರ 'ಕ್ಲೈಮ್ಯಾಕ್ಸ್ ಇನ್ನೂ ಮುಗಿಲ್ಲ'ವಂತೆ! ನಿಜಕ್ಕೂ ವರಿಷ್ಟ ಎಂದು ನಾವಂದುಕೊಂಡಿದ್ದ ಬಿಜೆಪಿ ಮಂಡಲಿ ಏನಾದರೂ ತೀರ್ಮಾನ ಕೈಗೊಳ್ಳುತ್ತಿದ್ದವರೆಗೆ ಕ್ಲೈಮ್ಯಾಕ್ಸ್ ಉಳಿದುಕೊಂಡಿತ್ತು. ಆದರೆ ಅದೇ, ಹಸಿದ ಹೆಬ್ಬುಲಿ, ಅಪ್ಪಾವಿ ಹರಕೆಯ ಕುರಿ ಮತ್ತು ಅದು ಒಂದಿಷ್ಟುದಿನ ಬದುಕಿರಲು ಹಿಡಿಹುಲ್ಲುಗಳನ್ನು ಒಂದು ಬೋನಿನಲ್ಲಿಟ್ಟು ಬೀಗಹಾಕುವ ರಾಜೀಸೂತ್ರವನ್ನು ಹೆಣೆದಾದಮೆಲೆ ಇನ್ನೆಂಥಾ'ಕ್ಲೈಮ್ಯಾಕ್ಸ್'? ಈಗ ಎನಿದ್ದರೂ ಆಂಟೀ-ಕ್ಲೈಮ್ಯಾಕ್ಸ್ ಮಾತ್ರಾ. ಇಟ್ಟ ವಸ್ತುಗಳಲ್ಲಿ ಯಾವುದನ್ನು ಯಾವುದು ತಿಂದುಹಾಕೀತೆನ್ನುವುದು Obvious ವಿಚಾರ. ಇನ್ನೂ ರೆಡ್ಡಿಯವರ ಈ ನಿರೀಕ್ಷೆ ನೋಡಿ ಬಿಜೆಪಿಗೆ ಈಗಲೇ ಶ್ರಸದ್ಧಾಂಜಲಿ ಬರೆದುಬಿಡಬೇಕೆನಿಸಿತು!
ಒಬ್ಬ ಮನುಷ್ಯ ಸತ್ತಮೇಲಷ್ಟೇ ಅಲ್ಲವೇ, ಅತ ಬದುಕಿದ್ದಾಗಿನ ಮೌಲ್ಯ ಅರ್ಥವಾಗುವುದು? ಅದರಲ್ಲೂ ಅಕಾಲಮೃತ್ಯುವಿಗೆ ತುತ್ತಾದ ವ್ಯಕ್ತಿಯ ಬಗ್ಗೆಯಂತೂ ಮರುಕ ಉಮ್ಮಳಿಸಿ ಬರುತ್ತದೆ! ಆದ್ದರಿಂದಲೇ ಇಂಥವರಿಗೆ ಸಲ್ಲಿಸುವ ಶ್ರದ್ಧಾಜಲಿಯಲ್ಲಿ ಮಾಮೂಲೀ ಉತ್ಪ್ರೇಕ್ಷೆಯಿದ್ದರೂ ನಿಜವಾದ ಕಳಕಳಿಯೂ ಒಂದಷ್ಟು ಇದ್ದೇ ತೀರುತ್ತದೆ! ಮಹಾಚುನಾವನೆಯಲ್ಲಿ, ಪಕ್ಷ, ಮಣ್ಣು ಮುಕ್ಕಿದ್ದಕ್ಕೆ ತೂ-ತೂ, ಮೈ-ಮೈ 'ವ್ಯಕ್ತಿ'ಗಳು ಕಾರಣವಿರಬಹುದು. ಆದರೆ ನಂತರದ ಅಸೆಂಬ್ಲಿ ಚುನಾವಣೆ ಮತ್ತು ಉಪಚುನಾವಣೆಗಳಲ್ಲಾದರೂ ಮೀಸೆ ಒರೆಸಿಕೊಳ್ಳುವುದು ಸಾಧ್ಯವಾಗದ್ದಕ್ಕೆ ಕಾರುಬಾರಿನ ಸನ್ನಿವೆಶವೇ ಕಾರಣವಲ್ಲವೇ? ಈ ಬಗ್ಗೆ ಯಾವ ಸಮಾವೇಶದಲ್ಲೂ ಪ್ರಾಮಾಣಿಕ 'ಆತ್ಮಾವಲೋಕನ' ನಡೆದಂತೆಯೇ ಎನಿಸುವುದಿಲ್ಲ!
ನಿಜವಾಗಿ ಬಿಜೆಪಿ ಏತಕ್ಕಾದರೂ ಬೇಕಾಗಿತ್ತು? ಅಲ್ಪಸಂಖ್ಯಾತರೆಂಬ ಪ್ರತ್ಯೇಕತೆಯನ್ನು ಉಳಿಸಿ ಬೆಳೆಸುವ ಒಲೈಕೆ ರಾಜಕೀಯಕ್ಕೆ ಮಂಗಳ ಹಾಡಿ ಅವರನ್ನು ಸಮಾನವಾಗಿ ರಾಷ್ಟ್ರೀಯ ಮುಖ್ಯವಾಹಿನಿಗೆ ತರುತ್ತದೆಂಬ ನಂಬಿಕೆ ಬಿಜೆಪಿ ಮೇಲಿತ್ತು; ಇದೇ ವಿಷಯವನ್ನು ನೆಪ ಮಾಡಿಕೊಂಡು ಅಲ್ಪಸಂಖ್ಯಾತರಲ್ಲಿ ಭಯೋತ್ಪಾದನೆ ಮಾಡುವ ವಿವೇಕಹೀನ ಉಗ್ರರ ಚಿಕ್ಕ ಗುಂಪೊಂದು ಪಕ್ಷದೊಳಗೇ ಸಮಾವೇಶವಗಿತ್ತಾದರೂ ಅದನ್ನು ಹಿಡಿತದಲ್ಲಿಟ್ಟುಕೊಳ್ಳುವ ಸಾಮರ್ಥ್ಯ-ವಿವೇಕವನ್ನೂ ಪಕ್ಷದ ಹೈಕಮಾಂಡಿನಲ್ಲಿ ಜನ, ನಿರೀಕ್ಷಿಸಿದ್ದರು; ಅಭಿವೃದ್ಧಿಗಾಗಾಗಿ 'ಗುಜರಾತ್ ಮಾದರಿ'ಯನ್ನು ಹಾಡಿ-ಹೊಗಳಿದ್ದು, ಜನತೆಯನ್ನು ಪುಳಕಗೊಳಿಸಿತ್ತು! ಆದರೆ ಸೋತ ಸಂಕಟದಲ್ಲಿ ಇದೆಲ್ಲಾ ನಿರೀಕ್ಷೆ ಮತ್ತು 'ವಿವೇಕ', 'ಪ್ರಾಮಾಣಿಕತೆ'ಯನ್ನೂ ಮನೆಗೆ ಕಳಿಸಲಾಯಿತು!
ಈಗ ಇದೊಂದು ಅನನುಭವಿ ರಾಜಕೀಯ ಪಕ್ಷಮಾತ್ರವಾಗಿಹೋಗಿರುವಂತಿದೆ! ಇಲ್ಲದಿದ್ದರೆ ಇದು ಸಹ ಇತರ ಪಕ್ಷಗಳಂತೆ, 'ಪಾರ್ಟಿ ಫಂಡ್‌'ಗಾಗಿ ಧನಾಢ್ಯರನ್ನು ಓಲೈಸಿ, ಅವರನ್ನು ಎದುರು ಹಾಕಿಕೊಳ್ಳಲಾರದೇ, ಆ ಕೈಗಳಿಗೇ ಕೈಯಾರೆ ಜುಟ್ಟೊಪ್ಪಿಸಿಕೊಡುವ ರಾಜೀ ಸೂತ್ರ ತಯಾರಿಸುತ್ತಿತ್ತೇ?!
ನಾಳೆಯ ನಿರೀಕ್ಷೆ ಇರದ, ಇಂದಿನ ಬಗ್ಗೆ ಸದಸದ್ವಿವೇಕವೂ ಇರದ ಹತಾಶ ಪಕ್ಷವೊಂದು, ಪ್ರಮುಖ ರಾಷ್ಟ್ರೀಯ ವಿಪಕ್ಷವಾಗಿಯಾದರೂ, ಅಡಳಿತದ ಅತಿರೇಕಗಳಿಗೆ ಸಮರ್ಥವಾಗಿ ಅಂಕುಶ ಹಾಕಬಲ್ಲುದೇ?

12 ನವೆಂಬರ್, 2009

ಮನೆಹಾಡುಗಳ ಆಧ್ಯಾತ್ಮಿಕ ಅನುಭಾವ

ವಿಶಿಷ್ಟ ಸಮುದಾಯದವರು ನಿರ್ದಿಷ್ಟ ಸಂದರ್ಭಗಳಲ್ಲಿ ಹಾಡುವ 'ಸಂಪ್ರದಾಯದ ಹಾಡುಗಳು' ಎಂಬ catagory ಅಲ್ಲಲ್ಲಿ ಉಳಿದುಕೊಂಡಿದೆ. 'ಗೌರಿ ಹಬ್ಬದ ಹಾಡು', 'ಮಂಗಳ ಗೌರಿ ಹಾಡು', ಐದು 'ಶುಕ್ರವಾರದ ಹಾಡು' - ಇತ್ಯಾದಿ, ಇತ್ಯಾದಿಗಳು ಪುಸ್ತಕ ಮಾರಾಟದ ಹಳೆ ಅಂಗಡಿಗಳಲ್ಲಿ ಅಚ್ಚಿನಲ್ಲೂ ಸಿಗುತ್ತವೆ. ಇವೆಲ್ಲಾ ಆಯಾಯಾ ದಿನವಿಶೇಷದ ಶಾಸ್ತ್ರ-ಸಂಪ್ರದಾಯಗಳಿಗೆ ಸಂಬಂಧಪಟ್ಟವು. ಹಬ್ಬದ ಸಾಧನ-ಸಲಕರಣೆ ಮತ್ತು ಕ್ರಿಯಾ-ಕಲಾಪಗಳಿಗೂ ಈ ಹಾಡೇ ಆಧಾರವಾಗಿರುವುದುಂಟು. ಉದಾಹರಣೆಗೆ ನಾಗರಚೌತಿ ಹಾಡಿನಲ್ಲಿ, ಜಾನಪದ ಕಥಾ ನಾಯಕಿ, 'ಒಂದು ಕೇದಿಗೆಯೊಳಗೆ ಹೊಂದಿಕೊಡಿಹ ಶೇಷ' ಕಚ್ಚಿ ಸತ್ತ ತನ್ನಣ್ಣನಿಗೆ ಮರುಜೀವ ನೀಡಲು, 'ನೆನೆಯಕ್ಕಿ, ನೆನೆ ಕಡಲೆ, ಕೊನೆಯ ಬಾಳೆಹಣ್ಣು' ತೆಕ್ಕೊಂಡು ಹುತ್ತದತ್ತ ನಡೆಯುತ್ತಾಳೆ. ಇಂದು ಸಹ ಚೌತಿ ನಾಗಪ್ಪನಿಗೆ ಈ ವಸ್ತುಗಳೆ ನೈವೇದ್ಯ!
ಇವು 'ಹೆಚ್ಚುಕಟ್ಟಳೆ ಹಾಡುಗಳು' ಆದರೆ ಇವೇ ಅಲ್ಲದೆ, ಹಳೆಕಾಲದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು, ನೂರಾರು ಸಂಖ್ಯೆಯಲ್ಲಿ 'ನಿತ್ಯಕಟ್ಟಳೆ ಹಾಡು'ಗಳನ್ನೂ ಹೇಳಿಕೊಳ್ಳುತ್ತಿದ್ದದ್ದೂ ಉಂಟು. ಇವುಗಳು ಅಚ್ಚಿನಲ್ಲಿ ಸಿಗುವುದಿರಲಿ, ಬಹುತೇಕ ಯಾರು ಮಾಡಿದ್ದರೆಂಬ ಸುಳಿವೂ ಸಿಕ್ಕುವುದಿಲ್ಲ. ಅಂದಮಾತ್ರಕ್ಕೆ ಇವೆಲ್ಲಾ ಕಾಕರೀ-ಬೀಕರಿ ಕಾಟಾಚರದವೆಂದಲ್ಲ. ಅನುಸಂಧಾನಪೂರ್ವಕವಾಗಿ ಅಂದುಕೊಂಡರೆ ಉನ್ನತ ಆಧ್ಯಾತ್ಮಿಕ ಅನುಭಾವ ಉಂಟುಮಾಡುವ ಅಂತರ್ಗತ ಸಾಮಾರ್ಥ್ಯವೂ ಇವುಗಳಿಗುಂಟು. (ಗದ್ಯ) ''ಅನಂತಕಲ್ಯಾಣ ಗುಣಪರಿಪೂರ್ಣ, ಅನಂತಾನಮತೋತ್ತಮ, ನಿಮ್ಮ ವಸ್ತು-ನೀವು ಕೊಟ್ಟಂಥಾದ್ದು / ತೈಲದಲ್ಲಿ-ಕಾಂತೀಲಿ ಲಕ್ಷ್ಮೀದೇವೀರ ಸನ್ನಿಧಾನ/ ಪಾತ್ರೇಲಿ ಬ್ರಹ್ಮ ದೇವರ ಸನ್ನಿಧಾನ/ ಬತ್ತೀಲಿ ಇಂದ್ರ ದೇವರ ಸನ್ನಿಧಾನ/ ಕಪ್ಪಿನಲ್ಲಿ ರುದ್ರ ದೇವರ ಸನ್ನಿಧಾನ/ ಕೆಂಪಿನಲ್ಲಿ ಸಂಕರ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ ದೇವರ ಸನ್ನಿಧಾನ/ ಇಷ್ಟೂ ಮಂದಿ ಉರ್ಧ್ವಮೂರ್ತಿಯಾಗಿ ನಿಂತಿದ್ದೀರಿ- ಒಳ್ಳೆಯವರಲ್ಲಿ ತಾರತಮ್ಯ ಜ್ಞಾನ ಕೊಟ್ಟು, ನಾ ಹಚ್ಚಿಟ್ಟಂಥಾ ದೀವಿಗೆ ನಿಮ್ಮ ಪಾದಕ್ಕೆ ಸಂಕರಿಸಲಿ- ಇತಿ ಜ್ಯೋತಿ ಸ್ತೋತ್ರ ಸಂಪೂರ್ಣಂ ಶ್ರೀಕೃಷ್ಣಾರ್ಪಣಮಸ್ತು//'' ಎಂದು ಹೇಳಿಕೊಂಡು ದೀಪ ಹಚ್ಚುವುದರಲ್ಲೇ ಭಾವುಕರು ಯೋಗಾನುಭವ ಹೊಂದುವುದು ಸಾಧ್ಯವಾಗಲರದೇ? ಅಂತೆಯೇ 'ನಾರಾಯಣ ನಿಮ್ಮ ನಾಮವ ನೆನೆದು, ನಾಲಗೆ ತುದಿಯಲಿ ಅಮೃತವನೆರೆದು/ ರಾಮನಾಮವೆಂಬೊ ಸ್ವಾದವ ತಿಳಿದು/ ಅಬ್ಜದ ನಾಭನ ಭಕ್ತಿಗೆ ಮೆಚ್ಚಿ ಅನಂತಪುರುಷನ ಗುಣಕಥೆ ಕೇಳಿ... ಎಂದು ಸುಲಲಿತವಾಗಿ ಮುಂದೆ ಸಾಗುವ ಪದ್ಯ, 'ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ' ಎಂಬ ಪ್ರಸಿದ್ಧ ಶಿವಮಾನಸ ಪೂಜೆಯ ಎಲ್ಲಾ ಆಯಾಮಗಳನ್ನೂ ಒಳಗೊಂಡು, ಗೃಹಕೃತ್ಯದ ಮಜಲುಗಳಲ್ಲೇ ನಾರಯಣನ ಅರಾಧನೆ ಪೂರೈಸುವ ಚಮತ್ಕಾರ ಒಳಗೊಂಡಿದೆ!
ಇಂತಹ ನೂರಾರು ಹಾಡುಗಳನ್ನು ನಮ್ಮಮ್ಮ ದಿನನಿತ್ಯ ಹೇಳಿಕೊಳ್ಳುತ್ತಿದ್ದರು. ಆಗೆಲ್ಲಾ ಇದು ನಮಗೆ Routine ಎನಿಸಿಹೋಗಿತ್ತು. ಈಗ ಆ ಪೈಕಿ ಐದಾರು ಮಾತ್ರಾ ಜ್ಞಾಪಕ ಇದೆ!
ಈ ಹಾಡುಗಳು ವಯಸ್ಸಾದವರ 'ಕಗ್ಗ' ಅಲ್ಲ. ಇವೆಲ್ಲಾ 'ಶಾಲು ಪಾಂಡಿತ್ಯ'ದ ಓದಿನಿಂದಲೇ ಮೂಡಿ ಬಂದದ್ದೂ ಅಲ್ಲ. ಅನುಭಾವಿಗಳು ಅನುಭವಿಸಿ ಹೇಳಿ ಹೋದ ಈ ನೈಜ ಆಧ್ಯಾತ್ಮಿಕ ಸಂಪತ್ತು, ಇದು! ಇದನ್ನು ಮುಂದಿನವರಿಗಾಗಿ ಅಷ್ಟಿಷ್ಟಾದರೂ ಉಳಿಸಿಟ್ಟುಕೊಳ್ಳುವುದು ಒಳ್ಳೆಯದು!

11 ನವೆಂಬರ್, 2009

ಈ ಭಾಷಾಭಿಮಾನ ಅದೆಷ್ಟು ನೈಜ?

ಮಹಾರಾಷ್ಟ್ರದ ಸೂಕ್ಷ್ಮ ಸಂವೇದೀ ಸ್ಪಂದನಶೀಲ ಜನತೆ ಆ ರಾಜ್ಯದ ವಿಧಸಭೆಗೆ 13 ಮಂದಿ ಶಾಸಕರನ್ನು ಅರಿಸಿ ಕಳಿಸಿರುವುದು ಅಭಿಮಾನದ ಸಂಗತಿ. ವ್ಯಾವಹಾರಿಕವಾದ ಶಿಕ್ಷಣ ಮಾಧ್ಯಮ, ಆಡಳಿತ ಮಾಧ್ಯಮ, ಸ್ಥಳೀಯರ ಉದ್ಯೋಗಾವಕಾಶ ಇತ್ಯಾದಿ ಅಸಲಿ ವಿಚಾರ-ವಿವಾದಗಳಲ್ಲಿ ಜನತೆಗೆ ಪ್ರಾಮಾಣಿಕ ಎಚ್ಚರ ಉಂಟಾಗುತ್ತಿದೆಯೇ ಎಂಬ ಆಶಾಬಾವವನ್ನು ಈ ಫಲಿತಾಂಶ ಪ್ರೇರೇಪಿಸಿತ್ತು. ಆದರಿದು ಅವಿವೇಕದ ಹಾದಿ ಹಿಡಿಯಿತೋ ಅಥವಾ ಮೋಸ ರಾಜಕೀಯದ ತಂತ್ರಗಾರಿಕೆ ಮಾತ್ರವಾಗಿ ತಲೆಯೆತ್ತಿರುವುದೋ ಎಂಬ ಅನುಮಾನ ಹುಟ್ಟಿಸುವ ವಿದ್ಯಮಾನ ವಿಧಾನ ಸಭೆಯ 'ಸಾಂಪ್ರದಯಕ' ಅಧಿವೇಶನದಲ್ಲೇ ನಡೆದು ಹೋಗಿದೆ!
ಮಹಾರಾಷ್ಟ್ರ ವಿಧನಸಭೆಯಲ್ಲಿ, ಸದಸ್ಯರು ಮರಾಠಿಯಲ್ಲೇ ಪ್ರಮಾಣವಚನ ಸ್ವೀಕರಿಸಬೇಕೆಂದು ಆಶಿಸುವುದರಲ್ಲಿ, ಬೇಡುವುದರಲ್ಲಿ, ಒತ್ತಾಯಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಹಿಂದಿಯಲ್ಲಿ ಪ್ರಮಾಣ ಆರಂಭಿಸಿದ ಸದಸ್ಯರ ಮೈಕ್ ಕಿತ್ತುಕೊಳ್ಳುವುದು, ಕಪಾಳಕ್ಕೆ ಹೊಡೆಯುವುದು, ಬೀದಿ ಜಗಳದಂತಹ ಇಂತಹ ಇನ್ನಿತರ ಕ್ರಿಯಾ-ಕಲಾಪಗಳು, ಭಾಷಾಭಿಮಾನದ ಮೌಲ್ಯವನ್ನಲೀ, ಅಂಥದನ್ನು ಹೊಂದಿರುವ ಸಂಸ್ಕೃತಿವಂತಿಕೆಯನ್ನೂ ಸೂಚಿಸುವುದಿಲ್ಲ. ಅದೂ ರಾಷ್ಟ್ರಭಾಷೆಯೆಂಬ ಕೃತಕ ಮೌಲ್ಯದ ಹಿಂದಿಯಲ್ಲಿ ಕಲಾಪ ನಡೆಯುತ್ತಿರುವಾಗ ಈ ದಾಂಧಲೆ ನಡೆದಿದ್ದು, ಪ್ರತಿವಾದಿಗಳಿಗೆ ಗಟ್ಟಿಯಾದ ನೆಪವನ್ನೇ ಒದಗಿಸುತ್ತದೆ; ರಾಷ್ಟ್ರಮಟ್ಟದ ಬಹುಮತದ ವಿರೋಧವನ್ನು ಗಂಟು ಹಾಕುತ್ತದೆ; ಆ ಕೃತಕ ಬಹುಮತದೆದುರು, ನೈಜವಾದ ಪ್ರಾದೇಶಿಕಯೆ ಮತ್ತು ಭಾಷಾಭಿಮಾನದ ಮೌಲ್ಯಗಳು ತಲೆತಗ್ಗಿಸಿ ವಿಚಾರಣೆ ಎದುರಿಸಬೇಕಾಗಿ ಬರುತ್ತದೆ. ಅದ್ದರಿಂದ ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ , 'ಗೋಣಿ ಎತ್ತಿ ಒಗೆದ ಹೊಸ ಅಗಸ'ನ ಈ ಸಾಹಸ, ನಿಜವಾದ ಉದಾತ್ತವಾದಿಗಳು ಹೆಮ್ಮೆಪಡುವ ಸಂಗತಿಯಾಗಲಿಲ್ಲ!
ಒಂದು ರಾಜ್ಯದ ವಿಧಾನಸಭೆಯಲ್ಲಿ, ಶಾಸಕರು, ಆಯಾ ಪ್ರದೇಶದ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕಾದ್ದು, ಸೈದ್ಧಾಂತಿಕವಾಗಿ ಉಚಿತ ಹಾಗೂ ವಿಹಿತ. ಶಾಸನಸಭೆಯಲ್ಲಿ, ಪ್ರದೇಶದ ಜನತೆಯ ಹಿತಾಸಕ್ತಿ ಪ್ರತಿನಿಧಿಸುವವರು, ಅಲ್ಲಿನ ಭಾಷೆಯಲ್ಲೇ ವ್ಯಹರಿಸಬೇಕೆನ್ನುವುದು, ನೀತಿ ಮತ್ತು ಆತ್ಮವಂತಿಕೆ. ಭಾರತೀಯ ಪ್ರಜೆಗಳಾದವರು ಭಾರತ ದೇಶದ ಯಾವ ಭಾಗದಲ್ಲಿ ಬೇಕಾದರೂ ಸಂಚರಿಸಬಹುದು; ಎಲ್ಲಿ ಬೇಕಾದರೂ ನೆಲೆಸಬಹದು; ಆಸ್ತಿ-ಪಾಸ್ತಿ ಸಂಪಾದಿಸಬಹುದೆಂಬ ಔದಾರ್ಯವನ್ನೇನೋ ನಮ್ಮ ಸಂವಿಧಾನ ತೋರಿಸಿದೆ. ಅಂದಮಾತ್ರಕ್ಕೆ ಪ್ರಾದೇಶಿಕ 'ಸ್ವಂತಿಕೆ' ಇರಲೇಬಾರದು; ಜನತೆಗೆ ವಿಶಿಷ್ಟವಾದ "ನೆಲನಿಷ್ಠೆ" ಎನ್ನುವುದೇ ನಿಷಿದ್ಧ ಎಂದೇನೂ ಅದು ವಿಧಿಸುವುದಿಲ್ಲ! ಈ ತರ್ಕ-ವಿವೇಕಗಳು, ನವನಿರ್ಮಾಣ ಸಮಿತಿಯ "ಪೌರುಷ"ದಲ್ಲಿ ಇದ್ದಂತೆನಿಸಲಿಲ್ಲ!
ಪ್ರತಿ ರಾಜ್ಯವೆನ್ನುವುದೂ ಒಂದೊಂದು ಸಾಂಸ್ಕೃತಿಕ ಘಟಕ. ಭಾಷೆಗಳು ಅದಕ್ಕೆ ಆಧಾರ. ರಾಜ್ಯಗಳು ತಂತಮ್ಮ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ವಿಶಿಷ್ಟತೆ-ವೈವಿಧ್ಯತೆಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕೆನ್ನುವುದೇ ಭಾಷವಾರು ಪ್ರಾಂತ ವಿಂಗಡಣೆಯ ಉದ್ದೇಶ. ಆ 'ಪಕ್ಷ'ದಲ್ಲಿದ್ದರೂ, ಈ 'ಪಕ್ಷ'ದಲ್ಲಿದ್ದರೂ, ಸಂಸ್ಕೃತಿಯ ಅ, ಆ, ಇಯೂ ಗೊತ್ತಿರದ ಅಬ್ಬರದ ರಾಜಕಾರಣಿಗಳಿಗೆ ಈ ಸೂಕ್ಷ್ಮಸಂವೆದನೆ ಎಲ್ಲಿಂದ ಅರ್ಥವಾಗಬೇಕು?!
ಅವರ ಭಾಗಕ್ಕೆ, ಮತಧರ್ಮಜಾತಿಗಳಂತೆ, ಭಾಷೆ ಸಹ, ಓಟು ಒಡೆಯುವ ಒಂದು ಸಾಧನ! ಅವರ ಉದಾರ ಕಾರುಬಾರಿನಲ್ಲಿ, ಭಾಷೆಯ 'ಸಾಧನೆ'ಯೂ ಅಷ್ಟಕ್ಕೇ ಸೀಮಿತವಾಗಿ ಉಳಿದುಕೊಂಡಿದೆ!
ರಾಜಕೀಯ ಅಸಭ್ಯತೆ, ಸಂನ್ನತೆಯನ್ನು ಇನ್ನೂ ಸಂಪೂರ್ಣ ನುಂಗಿ-ನೊಣೆದಿರದಿದ್ದರೆ, ವಿವೇಕಶಾಲಿಗಳಾದವರು ಆಲೋಚಿಸಲಿ- ಒಂದು ನೆಲದಲ್ಲಿ ನೆಲೆ ನಿಂತವರು ಆ ಭಾಷೆಯ ಅರಿವಿಲ್ಲದೆ ಬದುಕುವುದು ಅಸಾಧ್ಯ ಎಂಬ ಸಹಜ ಸನ್ನಿವೇಶ ಉಂಟಾಗಬೇಕು; ಇದು ತಳಮಟ್ಟದಿಂದ-ಬೇರುಮಟ್ಟದಿಂದ, ಪ್ರಜ್ಞಾತೀತವಾಗಿ-ಸ್ವಯಂಚಲಿತವಾಗಿ ಜಾರಿಯಾಗಬೇಕು. ಇದಕ್ಕಾಗಿ, ಪ್ರಾಥಮಿಕ ಶಿಕ್ಷಣ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಮಾತ್ರಾ ನಡೆಯುವುವಂತಾಗಬೇಕು. ಹೀಗೆ ಮಾಡುವ 'ಗಂಡಸ್ತನ' ಅಂದರೆ 'ಪುರುಷಕಾರ' ರಾಷ್ಟ್ರದ ರಕ್ತದಲ್ಲಿದೆಯೇ?!
ಕರೆಯಬೇಕಾದರೆ ಇದು ಸಂಖ್ಯೆ 9448047559

09 ನವೆಂಬರ್, 2009

ಅಂತೂ ''ಪರಿಹಾರ"ವಾಯಿತೇ?

ರಾಜ್ಯದ ಬಿಜೆಪಿ ಆಡಳಿತದಲ್ಲಿ 'ಹುಟ್ಟಿಹಾಕಿದ್ದ' ತರಲೆ ಅಂತೂ ಪರಿಹಾರವಾಯಿತೆಂದು ಅನುಬಂಧಿಗಳು ಅಭಿಮಾನದ ನಿಟ್ಟುಸಿರು ಬಿಡುತ್ತಿದ್ದಾರೇನೋ, ಈ 'ಪರಿಹಾರ' ಎಷ್ಟು ಕಾಲದ್ದು? ತರಲೆಯಾದರೋ ತತ್ತ್ವ-ಸೈದ್ಧಾಂತಿ ಭಿನ್ನಮತದಿಂದ ಉಂಟಾಗಿತ್ತೇ? ತತ್ತ್ವ-ಸಿದ್ಧಾಂತದ ಅರ್ಥೈಕೆಯಲ್ಲಿ ವ್ಯತ್ಯಾಸವಿದ್ದು, ರಾಜೀಸೂತ್ರವನ್ನು, ಸರಿಯಾದ ತಿಳುವಳಿಕೆ ಉಂಟುಮಾಡುವುದಕ್ಕಾಗಿ ಹೆಣೆಯಲಾಗಿದೆಯೇ? ಹಾಗಿದ್ದರೆ ಇದನ್ನು 'ತರಲೆ' ಎಂದು ಕರೆಯುವುದೇ ಅಪಭ್ರಂಶವಲ್ಲವೇ? ಇದಕ್ಕಾದರೋ ತತ್ತ್ವ-ಸಿದ್ಧಾಂತದ ಸೂತಕವೂ ಇರಲಿಲ್ಲ ಎನ್ನುವುದು, ಕಾಮನ್‌ಸೆನ್ಸ್‌ ಉಳ್ಳ ಹೈಸ್ಕೂಲ್‌ ಮಕ್ಕಳಿಗೂ ಗೊತ್ತಾಗಿಹೊಗಿರುವ ಸಂಗತಿ! ಹಾಗಾದರೆ Behave yourself ಎಂದು ಅತಿರೇಕಿಗಳಿಗೆ ಚಾಟಿಬೀಸಿ ಹೇಳುವ ತಾಖತ್ತನ್ನು ಹೈಕಮಾಂಡಾದರೂ ಉಳಿಸಿಕೊಂಡಿದೆ ಎಂದು ಹೆಮ್ಮೆ ಪಡೋಣವೇ? ಅದು ಇದ್ದಿದ್ದರೆ ಮಾನ ಬೀದಿಬಿಚ್ಚಾಗುವವರೆಗೂ ಕಾಯಬೇಕಾಗಿತ್ತೇಕೆ?
'ರಾಜಕೀಯ'ವೇ ಮರ್ಯಾದೆಗೆಟ್ಟವರ ವ್ಯವಹಾರ ಎನ್ನುವುದೇನೋ ಜನಜನಿತ ಸಂಗತಿಯೇ ಹೌದು. ಆದರೂ ರಾಜಕೀಯದ ಅಷಡ್ಡಾಳಗಳು ಹೆಸರಿಗಾದರೂ, ತೆರೆಮರೆಯ 'ಮರ್ಯಾದೆ'ಯಲ್ಲಿ ನಡೆಯುತ್ತಿತ್ತು. ಆದರೆ ಇಲ್ಲಿನ ವಿರೋಧಾಭಾಸಕಗಳು, ಅದುಮಿದಷ್ಟೂ ಅಡಗದೆ ಜೋರು-ಜೋರಾಗಿ ತಲೆಯೆತ್ತಿ, ಬೀದಿಯಲ್ಲೇ ಬತ್ತಲಗಿಹೋಯಿತಲ್ಲಾ, ಅದು ಹೈಕಮಾಂಡ್‌ಗೆ ಕಣಲಾರದೇ ಹೋಯಿತೇ? ಈ ವಿದ್ಯಮಾನವನ್ನು ಸಹ ಅತ್ಯಭಿಮಾನಿಗಳು 'ಪ್ರಾಮಾಣಿಕತೆ', 'ಪಾರದರ್ಶಕತೆ' ಎಂದೇ ಅರ್ಥೈಸಿಬಿಟ್ಟರು!
ತತ್ತ್ವಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿಯ ಧ್ಯೇಯ-ಧೋರಣೆಗಳನ್ನು ಅಲವಡಿಸಿಕೊಳ್ಳುವ ಭರವಸೆ ಹುಟ್ಟಿಸಿದ್ದ ಪಕ್ಷವಾದರೋ ವ್ಯಾವಹರಿಕವಾಗಿ ಧನವಂತರ ಗಾಳಕ್ಕೆ ಬಿದ್ದು, ಅವರ ಮರ್ಜಿಯಂತೆ ಅಡಳಿತದ ಉನ್ನತ ಅಧಿಕಾರಿಗಳನ್ನು ಚದುರಂಗದ ಕುದುರೆ-ಕಲಾಳುಗಳಂತೆ 'ನಡೆಸಿ', ಮಹಾಜನತೆಯನ್ನು, ಕಿವಿಗೆ ಹೂ ಸಿಕ್ಕಿಸಿಕೊಂಡವರೆನಿಸಿಬಿಟ್ಟತು!
ಇಷ್ಟರ ನಡುವೆಯೂ 'ಸಾಚಾ ಬಣ' ಗೆಲ್ಲಲಿ ಎಂದು ಹಾರೈಸಿದ 'ಸಭ್ಯ ಜನತೆ'ಗೂ ಕೊರತೆಯಿಲ್ಲ. ಅದರೆ ಇಲ್ಲಿ ಯಾರೂ ಸೋಲಲಿಲ್ಲ; ಯಾವ ಧ್ಯೇಯೋದ್ದೇಶವೂ ಗೆಲ್ಲಲಿಲ್ಲ! ರಾಜೀಸೂತ್ರದ ಹೆಸರಿನಲ್ಲೀಗ ಧನಬಲದ ಹುಲಿ, ಅಪ್ಪಾವಿತನದ ಹರಕೆ ಕುರಿ, ಅದಕ್ಕಾಗುವಷ್ಟು ಹುಲ್ಲುಹೊರೆಗಳನ್ನು ಒಂದು ವೇದಿಕೆಗೆ ಏರಿಸಲಾಗಿದೆ. ಪರಿಣಾಮವೇನೆನ್ನುವುದಕ್ಕೆ ಭವಿಷ್ಯಗಾರರ ಮುಂದೆ ಹೋಗಿ ಕವಡೆ ಹಾಕಬೇಕೇ!?
ಕರೆಯಬೇಕಾದರೆ ಇದು ಸಂಖ್ಯೆ 9448047559